ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಸುಮಾರು ದಿನಗಳ ಬಳಿಕ ಪ್ರತ್ಯಕ್ಷರಾಗಿದ್ದಾರೆ. ಈ ಸಂಬಂಧ ವಿಡಿಯೋ ಮೂಲಕ ತಿಳಿಸಿರುವ ಅವರು ಮೇ.31 ರಂದು ನಾನು ರಾಜ್ಯಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾರೆ. ವಿದೇಶದಿಂದ ವಿಡಿಯೋ ರಿಲೀಸ್ ಮಾಡಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್.ಐ.ಟಿ ಮುಂದೆ ಹಾಜರಾಗುತ್ತೇನೆ ಎಂದಿದ್ದಾರೆ. ಈ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರವರೂ ಸಹ ರಿಯಾಕ್ಟ್ ಆಗಿದ್ದು, ಪ್ರಜ್ವಲ್ ಬರುತ್ತಿರುವುದು ನಮಗೆ ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಹಂಚಿಕೊಂಡ ವಿಡಿಯೋದಲ್ಲೇನಿದೆ ಎಂಬ ವಿಚಾರಕ್ಕೆ ಬಂದರೇ, ನಾನು ವಿದೇಶಕ್ಕೆ ಹೋಗುವ ಬಗ್ಗೆ ಮೊದಲೇ ಪ್ಲಾನ್ ಆಗಿತ್ತು. ಹೋಗುವಾಗ ನನ್ನ ಮೇಲೆ ಯಾವುದೇ ಆರೋಪವಿರಲಿಲ್ಲ. ವಿದೇಶಕ್ಕೆ ಹೋದ ಬಳಿಕ ಯೂಟ್ಯೂಬ್ ನಲ್ಲಿ ನೋಡಿ ನನ್ನ ಮೇಲೆ ಗಂಭೀರ ಆರೋಪ ಬಂದಿರುವುದು ಕಂಡುಬಂದಿದೆ. ಬಳಿಕ ನನ್ನ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಎಸ್.ಐ.ಟಿ. ನೊಟೀಸ್ ನೀಡಿದ ವಿಚಾರ ಗೊತ್ತಾಯ್ತು. ನಾನು ರಾಜಕೀಯವಾಗಿ ಬೆಳೆಯಬಾರದೆಂಬ ಕಾರಣದಿಂದ ನನ್ನ ಮೇಲೆ ಪಿತೂರಿ ಮಾಡಿದ್ದಾರೆ. ಚುನಾವಣಾ ಸಮಯದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೇಸ್ ನಾಯಕರ ಆರೋಪದಿಂದ ನಾನು ಮಾನಸಿಕ ಖಿನ್ನತೆಗೆ ಜಾರಿದ್ದೇನೆ. ಈ ಖಿನ್ನತೆಯಿಂದ ಹೊರಬರಲು ಕೆಲ ಸಮಯ ಬೇಕಾಯ್ತು. ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ಈ ಸುಳ್ಳು ಪ್ರಕರಣದಿಂದ ನಾನು ಹೊರಬರುತ್ತೇನೆ. ಬಂದ ಮೇಲೆ ನಾನು ಎಲ್ಲರಿಗೂ ಉತ್ತರಿಸುತ್ತೇನೆ. ಮೇ.31 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾರೆ.
ವಿಡಿಯೋ ನೋಡಲು ಈ ಲಿಂಕ್ ಓಪೆನ್ ಮಾಡಿ: https://fb.watch/skaHx76sXU/
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹಚ್.ಡಿ.ದೇವೆಗೌಡರವರು ಹಾಗೂ ನಾನು ಪ್ರಜ್ವಲ್ ಗೆ ಮನವಿ ಮಾಡಿಕೊಂಡಿದ್ದೇವು. ಎಲ್ಲೇ ಇದ್ದರೂ ಬಂದು SIT ಮುಂದೆ ಹಾಜರಾಗುವ ಮೂಲಕ ತನಿಖೆಗೆ ಸಹಕಾರ ಕೊಡುವಂತೆ ಕೇಳಿಕೊಂಡಿದ್ದೆವು. ಇದೀಗ ಅವರು ನಮ್ಮ ಮನವಿಗೆ ಸ್ಪಂಧಿಸಿ ಬರುತ್ತಿರುವುದು ನಮಗೂ ಸ್ವಲ್ಪ ಸಮಾಧಾನ ತಂದಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.