ಹಣ ಅಂದರೇ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ, ಅನೇಕರು ಸುಲಭವಾಗಿ ಹಣ ಸಂಪಾದನೆ ಮಾಡುವ ಆಸೆಯಿಂದ ಹಣ ಕಳೆದುಕೊಳ್ಳುತ್ತಿರುತ್ತಾರೆ. ಇದೀಗ ಷೇರು ಮಾರುಕಟ್ಟೆಯಲ್ಲಿ ಹಣ ದ್ವಿಗುಣ ಮಾಡುವುದಾಗಿ ನೂರಾರು ಮಂದಿಯನ್ನು ವಂಚನೆ ಮಾಡಿರುವ ಪ್ರಕರಣ ಕಲಬುರಗಿಯಲ್ಲಿ ನಡೆದಿದೆ. ಆರೋಪಿಗಳನ್ನು ಉತ್ಕರ್ಷ ಹಾಗೂ ಸಾವಿತ್ರಿ ಎಂದು ಗುರ್ತಿಸಲಾಗಿದೆ.
ಕರ್ನಾಟಕದ ಕಲಬುರಗಿ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದೆ. ಉತ್ಕರ್ಷ ಹಾಗೂ ಸಾವಿತ್ರಿ ಎನ್ನುವವರು ಹಣ ದ್ವಿಗುಣ ಮಾಡುವುದಾಗಿ 30 ಕೋಟಿಗೂ ಅಧಿಕ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಆರೋಪಿಗಳಾದ ಉತ್ಕರ್ಷ ಹಾಗೂ ಸಾವಿತ್ರಿ ದಂಪತಿ ಕ್ಯಾಪಿಟಲ್ ಗ್ರೌನ್ ಗ್ರೋತ್ ಪ್ಲಸ್ ಕಂಪನಿಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ. ಗಾಂಧಿನಗರದ ಬಳಿ ಬಿ.ಎಲ್.ಕಾಂಪ್ಲೆಕ್ಸ್ ನಲ್ಲಿ ಟ್ರೆಂಡಿಂಗ್ ಕಂಪನಿ ನಡೆಸುತ್ತಿದ್ದ ಈ ದಂಪತಿ ಯುವಕ ಹಾಗೂ ಯುವತಿಯರನ್ನೆ ಟಾರ್ಗೆಟ್ ಮಾಡಿ ಹಣ ವಂಚಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಈ ದಂಪತಿ 500 ಕ್ಕೂ ಅಧಿಕ ಜನರಿಂದ ಒಬ್ಬರಿಂದ 25 ಲಕ್ಷದಿಂದ ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರಂತೆ. ಅವರಿಗೆ ಸಹಾಯ ಮಾಡುತ್ತಿದ್ದ ವಿಜಯಸಿಂಗ್ ಹಜಾರೆ ಹಾಗೂ ಸುಧಾ ಎಂಬುವವರ ವಿರುದ್ದವೂ ದೂರು ದಾಖಲಾಗಿದೆ. ಉತ್ಕರ್ಷ್ ಹಾಗೂ ಸಾವಿತ್ರಿ ದಂಪತಿ ವಿರುದ್ಧ ರೋಜಾ ಪೊಲೀಸ್ ಠಾಣೆಯಲ್ಲಿ ವಂಚನೆ ಸಂಬಂಧ ಎಫ್ ಐಆರ್ ದಾಖಲಾಗಿದೆ. ದೂರು ಕೊಡುತ್ತಿದ್ದಂತೆ ಅಪಾರ್ಟ್ ಮೆಂಟ್‌ನಿಂದ ವಂಚನೆಗೈದ ದಂಪತಿ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಸುನೀಲ್ ಎಂಬಾತ ಉತ್ಕರ್ಷ ಹಾಗೂ ಸಾವಿತ್ರಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಎಂಬ ಆರೋಪ ಸಹ ಕೇಳಿಬಂದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಧಾ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪ್ರಕರಣ ಬಯಲಾಗುತ್ತಿದ್ದಂತೆ ದೂರುಗಳ ಸಂಖ್ಯೆಯ ಸಹ ಹೆಚ್ಚಾಗುತ್ತಿದೆ ಎನ್ನಲಾಗಿದೆ.