ರಾಜ್ಯದ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಯನ್ನೇ ಗುರಿಯಾಗಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು ಬೆಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಭಕ್ತಿ-ಗೌರವದ ಕೇಂದ್ರವಾದ ಮಠದ ಶ್ರೀಗಳಿಗೆ ಆಮಿಷವೊಡ್ಡಿ, ಲಕ್ಷಾಂತರ ರೂಪಾಯಿ ಸುಲಿಗೆ (Honeytrap) ಮಾಡಿದ ಆರೋಪದ ಮೇಲೆ ಚಿಕ್ಕಮಗಳೂರು ಮೂಲದ ಸ್ಪೂರ್ತಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

Honeytrap – ಪರಿಚಯ ಮಾಡಿಕೊಂಡು ಪಂಗನಾಮ ಹಾಕಿದ ‘ಸ್ಪೂರ್ತಿ’!
ಈ ಪ್ರಕರಣದ ರೋಚಕ ಕಥೆ ಶುರುವಾಗಿದ್ದು ಐದು ತಿಂಗಳ ಹಿಂದೆ. ಆರೋಪಿ ಸ್ಪೂರ್ತಿ, ಸ್ವಾಮೀಜಿಯವರಿಗೆ ಕರೆ ಮಾಡಿ ತಾನು ತಿಪಟೂರಿನಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಳು. ಮೊದಲಿಗೆ ಮಾತುಕತೆಯ ಮೂಲಕ ವಿಶ್ವಾಸ ಗಳಿಸಿದ ಈಕೆ, ನಂತರ ತನ್ನ ಅಸಲಿ ರೂಪ ತೋರಿಸಲು ಶುರು ಮಾಡಿದ್ದಳು. ಸ್ವಾಮೀಜಿಯವರನ್ನು ಭೇಟಿಯಾದ ಸಂದರ್ಭಗಳನ್ನು ಬಳಸಿಕೊಂಡು, ಅವರಿಂದ ಈಗಾಗಲೇ ಸುಮಾರು 4.5 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದಾಳೆ ಎನ್ನಲಾಗಿದೆ.
1 ಕೋಟಿ ರೂಪಾಯಿಗೆ ಬೇಡಿಕೆ: ಬೆದರಿಕೆ ಹಾಕಿದ್ದೇ ತಡ ಪೊಲೀಸರ ಎಂಟ್ರಿ!
ಕೇವಲ ಲಕ್ಷಾಂತರ ರೂಪಾಯಿಗೆ ತೃಪ್ತಳಾಗದ ಸ್ಪೂರ್ತಿ, ತನ್ನ ಸಹಚರರೊಂದಿಗೆ ಸೇರಿಕೊಂಡು ಬರೋಬ್ಬರಿ 1 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಾಳೆ. ಒಂದು ವೇಳೆ ಹಣ ನೀಡದಿದ್ದರೆ ಸ್ವಾಮೀಜಿಯವರ ಮಾನಹಾನಿ ಮಾಡುವುದಾಗಿ ಹಾಗೂ ಜೀವ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಇದರಿಂದ ಆತಂಕಗೊಂಡ ಸ್ವಾಮೀಜಿ ತಡಮಾಡದೆ ಸಿಸಿಬಿ ಪೊಲೀಸರ ಮೊರೆ ಹೋಗಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಮಹಿಳೆಯನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ. Read this also : ಸಾಲ ತೀರಿಸಲು ಹೆಂಡತಿಯೇ ಆಮಿಷ! 100ಕ್ಕೂ ಹೆಚ್ಚು ಜನರ ಹನಿಟ್ರ್ಯಾಪ್ ಮಾಡಿದ ದಂಪತಿ: ಬೆಚ್ಚಿಬೀಳಿಸುವ ಸತ್ಯ ಬಯಲು
ಇದು ಎರಡನೇ ಬಾರಿ: ಈ ಹಿಂದೆಯೂ ನಡೆದಿತ್ತು ಹನಿಟ್ರ್ಯಾಪ್ ಯತ್ನ!
ಗಮನಾರ್ಹ ಸಂಗತಿಯೆಂದರೆ, ಇದೇ ಸ್ವಾಮೀಜಿಯವರನ್ನು ಗುರಿಯಾಗಿಸಿಕೊಂಡು ಎರಡು ವರ್ಷಗಳ ಹಿಂದೆಯೂ ಇಂತಹದ್ದೇ ಒಂದು ಹನಿಟ್ರ್ಯಾಪ್ ಯತ್ನ ನಡೆದಿತ್ತು. ಆಗ ಆರೋಪಿಗಳು 6 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದರು. ಆ ಪ್ರಕರಣದಲ್ಲೂ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದರು. ಈಗ ಮತ್ತೆ ಅದೇ ರೀತಿಯ ಸಂಚು (Honeytrap) ನಡೆದಿರುವುದು ಮಠದ ಭಕ್ತರಲ್ಲಿ ಆತಂಕ ಮೂಡಿಸಿದೆ.

ಸುದ್ದಿಗೆ ಬ್ರೇಕ್ ಹಾಕಿದ ಕೋರ್ಟ್ ತಡೆಯಾಜ್ಞೆ
ಪ್ರಕರಣ ಗಂಭೀರ ಸ್ವರೂಪ (Honeytrap) ಪಡೆದುಕೊಳ್ಳುತ್ತಿದ್ದಂತೆ ಸ್ವಾಮೀಜಿಯವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮಗೆ ಸಂಬಂಧಿಸಿದ ಯಾವುದೇ ಫೋಟೋಗಳು ಅಥವಾ ವಿಡಿಯೋಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ತಡೆಯಾಜ್ಞೆ (Injunction Order) ತಂದಿದ್ದಾರೆ. ಸದ್ಯ ಬಂಧಿತ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈಕೆಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ.
