ಗುಡಿಬಂಡೆ: ಪ್ರತಿಯೊಬ್ಬ ಮಗುವಿನಲ್ಲೂ ಒಂದಲ್ಲೊಂದು ಪ್ರತಿಭೆಯಿರುತ್ತದೆ. ಆ ಪ್ರತಿಭೆಯನ್ನು ಪ್ರದರ್ಶಿಸಲು ಮಕ್ಕಳು ಧೈರ್ಯವಾಗಿ ಮುಂದಾಗಬೇಕು, ಜೊತೆಗೆ ಶಿಕ್ಷಕರು, ಪೋಷಕರೂ ಸಹ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಗ್ರಾಮ ವಿಕಾಸ ಸಂಸ್ಥೆಯ ಜಿಲ್ಲಾ ಸಂಯೋಜಕ ಜಿ.ಆರ್.ಮುನಿರಾಜು ತಿಳಿಸಿದರು.
ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ಗ್ರಾಮ ವಿಕಾಸ ಸಂಸ್ಥೆ ವತಿಯಿಂದ ಎಲ್ಲೋಡು ವಿಕಾಸ ಕೇಂದ್ರದ ಕಲಿಕಾ ಕೇಂದ್ರದ ಮಕ್ಕಳ ಬಾಲಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುನಿರಾಜು ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆ ಪ್ರದರ್ಶನ ಮಾಡಲು ಒಂದು ವೇದಿಕೆ ಬೇಕಾಗುತ್ತದೆ. ಮಕ್ಕಳು ಸಹ ಬೇಸಿಗೆ ಶಿಬಿರಗಳು, ಪ್ರತಿಭಾ ಕಾರಂಜಿಗಳು ಮೊದಲಾದ ಕಾರ್ಯಕ್ರಮಗಳು ಆಯೋಜನೆ ಮಾಡಿದಾಗ ಧೈರ್ಯದಿಂದ ಭಾಗವಹಿಸಬೇಕು. ಮಕ್ಕಳ ಪ್ರತಿಭೆ ತಕ್ಕಂತೆ ಪೋಷಕರು ಸಹ ಬೆಂಬಲ ನೀಡಬೇಕು. ಮಕ್ಕಳು ಬಾಲ್ಯದಿಂದಲೇ ದೇಶದ ಸಂಸ್ಕೃತಿ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು. ಶ್ರದ್ದಾ ಭಕ್ತಿಯಿಂದ ವಿದ್ಯೆಯನ್ನು ಕಲಿತು ದೇಶಕ್ಕೆ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಗ್ರಾಮ ವಿಕಾಸ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಬೆಳೆಸುವಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ ಎಂದರು.
ಇನ್ನೂ ಈ ಬಾಲ ಸಂಗಮ ಕಾರ್ಯಕ್ರಮದಲ್ಲಿ ಒಟ್ಟು 6 ಗ್ರಾಮಗಳ ಮಕ್ಕಳು ಭಾಗವಹಿಸಿದ್ದರು. ಬಾಲಸಂಗಮ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಕಲಿಸಿಕೊಡಲಾಯಿತು. ಮಕ್ಕಳಿಗೆ ಕೋಲಾಟ, ದೇಶಭಕ್ತಿ ಗೀತೆಗಳು ನೃತ್ಯ, ಕುಣಿತ ಭಜನೆ, ಭಗವದ್ಗೀತೆ, ಯೋಗ, ನಿತ್ಯ ಸ್ಲೋಕಗಳು ಮತ್ತು ಕ್ರೀಡಾಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ಈ ಸಮಯದಲ್ಲಿ ಎಲ್ಲೋಡು ಗ್ರಾಮ ಪಂಚಾಯಿತಿ ಸದಸ್ಯರು ಶಿವಮ್ಮ, ತಾಲೂಕು ಶಿಕ್ಷಣ ಸಂಯೋಜಕರು ವೆಂಕಟೇಶ್, ಸಿಬ್ಬಂದಿಗಳಾದ ಮಲ್ಲೇಶ್ ವೆಂಕಟೇಶ್ ರಾಧಮ್ಮ, ಇಂದು, ಅಮರಾವತಿ, ಲಕ್ಷ್ಮಿ, ಸೌಭಾಗ್ಯ ಲಕ್ಷ್ಮಿ ಪವಿತ್ರ ಮತ್ತು ಮಕ್ಕಳ ಪಾಲಕರು ಹಾಜರಿದ್ದರು.