ಶಿಡ್ಲಘಟ್ಟ : ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವುದರಿಂದ ಅಪಾಯಕಾರಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ರೋಗ ಹರಡುವುದನ್ನು ತಡೆಯಬಹುದೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
ನಗರದಲ್ಲಿ ನಗರಸಭೆಯ ಪೌರ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ರೋಗ ತಡೆ ಕುರಿತು ಹಮ್ಮಿಕೊಂಡಿದ್ದ ಮುಂಜಾಗ್ರತ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು ಸಾಮಾನ್ಯವಾಗಿ ಮಳೆ ನೀರು ನಿಲ್ಲುವ ಕಡೆ ಸೊಳ್ಳೆಗಳ ಕಾಟ ಹೆಚ್ಚಿರುತ್ತದೆ. ಇದನ್ನು ತಡೆಯಬೇಕೆಂದರು.
ಡೆಂಗ್ಯೂ ನಿಯಂತ್ರಿಸಬೇಕಾದರೆ ಮೊದಲು ನಾವು ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ ಹಾಕಬೇಕು. ಅಲ್ಲದೇ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಕಾಲಕಾಲಕ್ಕೆ ಫಾಗಿಂಗ್ ಮಾಡಬೇಕು, ರಾತ್ರಿ ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಅಳವಡಿಸಿಕೊಳ್ಳಬೇಕೆಂದ ಅವರು, ಮುಖ್ಯವಾಗಿ ಸೊಳ್ಳೆಗಳ ಬೆಳವಣಿಗೆಯನ್ನು ಕಡಿಮೆ ಮಾಡುವ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸೋಂಕನ್ನು ತಡೆಗಟ್ಟಲು ಪೌರ ಕಾರ್ಮಿಕರು ಶ್ರಮಿಸಬೇಕು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್ ಮಾತನಾಡಿ ಮನೆಯ ಬಳಿ ಚರಂಡಿ ಗಳಲ್ಲಿ ನೀರು ನಿಲ್ಲದಂತೆ ಸರಾಗವಾಗಿ ಹರಿದು ಹೋಗುವಂತೆ ಸ್ವಚ್ಚತೆ ಮಾಡುವ ಜೊತೆಗೆ ಯಾವುದೇ ಘನತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸಲಹೆ ನೀಡುವುದರ ಮೂಲಕ ಆರೋಗ್ಯ ಶಿಕ್ಷಣವನ್ನು ನೀಡಿದರು. ವಾರಕ್ಕೊಮ್ಮೆ ವಾರದ ಒಣಗಳು ದಿನ ಆಚರಿಸಿ ತೊಟ್ಟಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ತೆಂಗಿನ ಚಿಪ್ಪು, ಟೈರುಗಳಲ್ಲಿ ನೀರು ಶೇಖರಣೆ ಆಗದಂತೆ ಎಚ್ಚರ ವಹಿಸಬೇಕೆಂದರು. ಈ ಸಂದರ್ಭದಲ್ಲಿ ನಗರ ಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮತ್ತು ಪೌರಕಾರ್ಮಿಕರು ಹಾಜರಿದ್ದರು.