Uttar Pradesh – ವೈದ್ಯರನ್ನು ನಾವು ‘ವೈದ್ಯೋ ನಾರಾಯಣೋ ಹರಿ’ ಅಂತೀವಿ, ಅಂದ್ರೆ ಮನುಷ್ಯರ ರೂಪದಲ್ಲಿರೋ ದೇವರು ಅಂತ. ಆದ್ರೆ, ಕೆಲವೊಮ್ಮೆ ಇದೇ ವೈದ್ಯರು ಮಾಡೋ ಎಡವಟ್ಟುಗಳನ್ನು ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತೆ. ಉತ್ತರ ಪ್ರದೇಶದ (Uttar Pradesh) ಮೀರತ್‌ನಲ್ಲಿ ಇಂಥದ್ದೇ ಒಂದು ವಿಚಿತ್ರ ಹಾಗೂ ಆಘಾತಕಾರಿ ಘಟನೆ ನಡೆದಿದೆ. ಗಾಯಗೊಂಡ ಮಗುವಿಗೆ ಚಿಕಿತ್ಸೆ ನೀಡಬೇಕಿದ್ದ ವೈದ್ಯರೊಬ್ಬರು ಹೊಲಿಗೆ ಹಾಕುವ ಬದಲು ‘ಫೆವಿಕ್ವಿಕ್’ (Fevikwik) ಅಂಟಿಸಿರುವ ಆರೋಪ ಕೇಳಿಬಂದಿದೆ!

Uttar Pradesh – ಗಾಯಕ್ಕೆ ಹೊಲಿಗೆ ಬದಲು ‘ಅಂಟು’ ಚಿಕಿತ್ಸೆ!
ಘಟನೆ ನಡೆದಿರುವುದು ಮೀರತ್‌ನ ಒಂದು ಖಾಸಗಿ ಆಸ್ಪತ್ರೆಯಲ್ಲಿ. ಸರ್ದಾರ್ ಜಸ್ಪಿಂದರ್ ಸಿಂಗ್ ಅವರ ಪುಟ್ಟ ಮಗು ಮನೆಯಲ್ಲಿ ಆಟವಾಡುತ್ತಾ ಮೇಜಿನ ತುದಿಗೆ ತಲೆ ಬಡಿದು ಹಣೆಯಲ್ಲಿ ರಕ್ತ ಸೋರುತ್ತಿತ್ತು. ತಕ್ಷಣ ಪೋಷಕರು ಗಾಬರಿಯಾಗಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆದರೆ, ಅಲ್ಲಿನ ವೈದ್ಯರೊಬ್ಬರು ಮಾಡಿದ ಕೆಲಸ ಕೇಳಿದರೆ ನಿಮಗೆ ನಂಬಲು ಸಾಧ್ಯವಾಗುವುದಿಲ್ಲ. ಗಾಯಕ್ಕೆ ಸರಿಯಾದ ಚಿಕಿತ್ಸೆ ನೀಡಿ, ಸ್ಟಿಚ್ (ಹೊಲಿಗೆ) ಹಾಕುವ ಬದಲು, ಕೇವಲ 5 ರೂಪಾಯಿ ಬೆಲೆಯ ಫೆವಿಕ್ವಿಕ್ ಟ್ಯೂಬ್ ಖರೀದಿಸಿ ತಂದು, ಅದೇ ಅಂಟಿನಿಂದ ಮಗುವಿನ ಗಾಯವನ್ನು ಮುಚ್ಚಿದ್ದಾರಂತೆ. ಮಗು ನೋವಿನಿಂದ ಬಿಡದೆ ಅಳುತ್ತಿದ್ದಾಗ, “ಸ್ವಲ್ಪ ಹೊತ್ತಿನಲ್ಲಿ ನೋವು ಕಡಿಮೆಯಾಗುತ್ತದೆ” ಎಂದು ವೈದ್ಯರು ಹೇಳಿ ಕಳುಹಿಸಿದ್ದಾರೆ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ.
Uttar Pradesh – ರಾತ್ರಿಯಿಡೀ ನಿದ್ದೆಯಿಲ್ಲದ ಮಗು
ಮನೆಗೆ ಬಂದ ಮೇಲೆಯೂ ಮಗುವಿನ ಅಳು ನಿಲ್ಲಲಿಲ್ಲ. ರಾತ್ರಿಯಿಡೀ ನಿದ್ದೆ ಇಲ್ಲದೆ ಮಗು ಒದ್ದಾಡುತ್ತಿತ್ತು. ಇದರಿಂದ ಕಂಗಾಲಾದ ಪೋಷಕರು ಮರುದಿನ ಬೆಳಿಗ್ಗೆ ತಕ್ಷಣ ಮಗುವನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಎರಡನೇ ಆಸ್ಪತ್ರೆಯ ವೈದ್ಯರಿಗೆ ಫೆವಿಕ್ವಿಕ್ ಅಂಟನ್ನು ತೆಗೆದುಹಾಕುವುದೇ ದೊಡ್ಡ ಸವಾಲಾಗಿತ್ತು. ಏಕೆಂದರೆ, ರಕ್ತದೊಂದಿಗೆ ಸೇರಿ ಅಂಟು ಗಟ್ಟಿಯಾಗಿ ಹೆಪ್ಪುಗಟ್ಟಿತ್ತು. ಆ ಗಮ್ ತೆಗೆಯಲು ಅಲ್ಲಿನ ವೈದ್ಯರು ಬರೋಬ್ಬರಿ ಮೂರು ಗಂಟೆಗಳ ಕಾಲ ಶ್ರಮಿಸಬೇಕಾಯಿತು! ಕೊನೆಗೆ ಗಾಯದ ಜಾಗವನ್ನು ಸ್ವಚ್ಛಗೊಳಿಸಿ, ಆ ಗಾಯ ಮುಚ್ಚಲು ನಾಲ್ಕು ಹೊಲಿಗೆಗಳನ್ನು ಹಾಕಿದರು. ಆಗಷ್ಟೇ ಪೋಷಕರಿಗೆ ಸಮಾಧಾನವಾಯಿತು.

Uttar Pradesh – “ಕಣ್ಣಿಗೆ ಸೋಂಕಿದ್ದರೆ ಏನಾಗುತ್ತಿತ್ತು?”
ಒಂದು ವೇಳೆ ತಾವು ಬೇರೆ ಆಸ್ಪತ್ರೆಗೆ ಹೋಗದಿದ್ದರೆ ಪರಿಸ್ಥಿತಿ ಇನ್ನೂ ಹದಗೆಡುತ್ತಿತ್ತು ಎಂದು ಮಗುವಿನ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. “ಕೇವಲ ಹಣೆಯ ಗಾಯಕ್ಕೆ ಮಾತ್ರವಲ್ಲ, ಒಂದುವೇಳೆ ಆ ಫೆವಿಕ್ವಿಕ್ ಅಂಟು ಸ್ವಲ್ಪ ಸೋರಿಕೆಯಾಗಿ ಮಗುವಿನ ಕಣ್ಣಿಗೆ ಹೋಗಿದ್ದರೆ ಕಣ್ಣೇ ಹೋಗುತ್ತಿತ್ತು!” ಎಂದು ಆಕ್ರೋಶಗೊಂಡಿರುವ ಪೋಷಕರು ಪ್ರಶ್ನಿಸಿದ್ದಾರೆ. Read this also : ವಿಷ ಸರ್ಪ ಕಚ್ಚಿದರೂ, ಭಯಪಡದೇ ಅದನ್ನೇ ಹಿಡಿದು ಹೋಗಿ ಪ್ರಾಣ ಉಳಿಸಿಕೊಂಡ ಭೂಪ…!
ಈ ಘಟನೆ ವೈದ್ಯಕೀಯ ನಿರ್ಲಕ್ಷ್ಯದ ಪರಾಕಾಷ್ಠೆ ಎಂದೇ ಹೇಳಬಹುದು. ಈ ಬಗ್ಗೆ ಮಗುವಿನ ಕುಟುಂಬಸ್ಥರು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ವಿಷಯ ತಿಳಿದ ತಕ್ಷಣ ತನಿಖಾ ಸಮಿತಿಯನ್ನು ರಚಿಸಲಾಗಿದೆ ಮತ್ತು ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಮಗುವಿನ ಪೋಷಕರು ಈ ಗಂಭೀರ ವಿಷಯವನ್ನು ಮುಖ್ಯಮಂತ್ರಿ ಕಚೇರಿಗೂ ತಲುಪಿಸಿದ್ದಾರೆ.
