ಜಗತ್ ಪ್ರಸಿದ್ದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಅದರಲ್ಲೂ ಕಾಲುನಡಿಗೆಯ ಮೂಲಕ ಸಹ ಅನೇಕರು ಹೋಗುತ್ತಿರುತ್ತಾರೆ. ಈ ಹಿಂದೆ ಪುಟಾಣಿ ಬಾಲಕಿಯೊಬ್ಬಳನ್ನು ಚಿರತೆಯೊಂದು ಕೊಂದುಹಾಕಿತ್ತು. ಬಳಿಕ ತಿರುಮಲದಲ್ಲಿ ಚಿರುತೆಯನ್ನು ಹಿಡಿಯಲಾಗಿತ್ತು. ಸುಮಾರು ದಿನಗಳ ಬಳಿಕ ಮತ್ತೆ ಚಿರತೆಗಳು ಕಾಣಿಸಿಕೊಂಡಿದ್ದು, ಭಕ್ತರು ಭಯಭೀತರಾಗಿದ್ದಾರೆ.
ಕಲಿಯುಗ ದೈವ ತಿರುಮಲದಲ್ಲಿ ನೆಲೆಸಿರುವ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುತ್ತಾರೆ. ಬಹುತೇಕ ಭಕ್ತರು ಕಾಲ್ನಡಿಗೆಯ ಮೂಲಕ ದರ್ಶನಕ್ಕೆ ಹೋಗುತ್ತಿರುತ್ತಾರೆ. ಅಲಿಪಿರಿ ಕಾಲು ದಾರಿಯ ಕೊನೆಯ ಮಟ್ಟಿಲುಗಳ ಬಳಿ ಎರಡು ಚಿರತೆಗಳು ಕಾಣಿಸಿಕೊಂಡು ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಭಕ್ತರು ಚಿರತೆಗಳನ್ನು ಕಂಡ ಕೂಡಲೇ ಜೋರಾಗಿ ಕಿರುಚಾಡಿದ್ದಾರೆ. ಭಕ್ತರ ಕಿರುಚಾಟಕ್ಕೆ ಚಿರತೆಗಳು ಅಲ್ಲಿಂದ ಕಾಡಿನೊಳಗೆ ಓಡಿಹೋಗಿವೆ. ಇನ್ನೂ ಸ್ಥಳಕ್ಕೆ ವಿಜಿಲೆನ್ಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ಸಹ ನಡೆಸುತ್ತಿದ್ದಾರೆ. ಜೊತೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯ ಜಾಡು ಹುಡುಕಲು ಕಾಡಿನೊಳಗೆ ತೆರಳಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ಭದ್ರತಾ ಸಿಬ್ಬಂದಿ ಭಕ್ತರನ್ನು ಗುಂಪು-ಗುಂಪಾಗಿ ಕಳುಹಿಸಲು ಮುಂದಾಗಿದ್ದಾರೆ.
ಇನ್ನೂ ಇತ್ತಿಚಿಗೆ ತಿರುಮಲದಲ್ಲಿ ಚಿರತೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಮೇ.15 ರಂದು ಸಹ ತಿರುಪತಿಯಿಂದ ತಿರುಮಲಕ್ಕೆ ಹೋಗುವಂತಹ ಎರಡನೇ ಘಾಟ್ ಬಳಿಯ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಬೆಳಗಿನ ಜಾವ ಭಕ್ತರ ಕಾರಿಗೆ ಚಿರತೆ ಅಡ್ಡ ಬಂದಿತ್ತು. ಈ ದೃಶ್ಯಗಳು ಅಲ್ಲಿನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಚಿರತೆಯನ್ನು ನೋಡಿ ಭಕ್ತರು ಬೆಚ್ಚಿ ಬಿದ್ದಿದ್ದರು. ಇದೀಗ ಮತ್ತೊಮ್ಮೆ ಚಿರತೆಗಳು ಕಾಣಿಸಿಕೊಂಡಿದ್ದು, ಭಕ್ತರು ಭಯಭೀತರಾಗಿದ್ದಾರೆ. ತಿರುಮಲಕ್ಕೆ ಬರುವಂತಹ ಭಕ್ತರು ಸಹ ಒಂಟಿಯಾಗಿ ಮೆಟ್ಟಿಲುಗಳನ್ನು ಹತ್ತದೆ ಗುಂಪು ಗುಂಪಾಗಿ ಮೆಟ್ಟಿಲುಗಳನ್ನು ಹತ್ತುವಂತೆ ಹಾಗೂ ಮಕ್ಕಳಿದ್ದರೇ ಎಚ್ಚರಿಕೆಯಿಂದ ಇರುವಂತೆ ಸೂಚನೆಗಳನ್ನು ಸಹ ಟಿಟಿಡಿ ನೀಡಿದೆ ಎನ್ನಲಾಗಿದೆ.
ಇನ್ನೂ ಕಳೆದ ಕೆಲವು ದಿನಗಳಿಂದ ತಿರುಮಲದ ತಿಮ್ಮಪ್ಪನ ದರ್ಶನಕ್ಕೆ ಭಾರಿ ಜನಸ್ತೋಮ ಹರಿದುಬರುತ್ತಿದೆ. ದರ್ಶನಕ್ಕೆ ಸುಮಾರು ಆರು ಕಿ.ಮೀ ದೂರ ಕ್ಯೂ ಇದೆ ಎನ್ನಲಾಗಿದೆ. ರಜೆಗಳಿರುವ ಕಾರಣದಿಂದ ಹೆಚ್ಚು ಭಕ್ತರು ತಿರುಮಲಕ್ಕೆ ಹೋಗುತ್ತಿದ್ದು, ಭಕ್ತರು ಪರದಾಡುವಂತಾಗಿದೆ. ತಿರುಮಲದಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ತಿಮ್ಮಪ್ಪನ ದರ್ಶನಕ್ಕೆ ಹೋಗುವುದು ಸೂಕ್ತ.