Crime : ಮದುವೆಯಾಗಿ ಕೇವಲ ಆರು ತಿಂಗಳಷ್ಟೇ ಕಳೆದಿದ್ದ ಯುವತಿಯೊಬ್ಬರು ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಕೆ.ಎಸ್. ಜಯಶ್ರೀ (30) ಎಂಬ ನವವಿವಾಹಿತೆ ತಮ್ಮ ತವರು ಮನೆಯ ಬಾತ್‌ರೂಂನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ಇಡೀ ಗ್ರಾಮದಲ್ಲಿ ನೀರವ ಮೌನವನ್ನು ಆವರಿಸಿದೆ.
Crime – ಯಾರು ಈ ಜಯಶ್ರೀ?
ಜಯಶ್ರೀ ಅವರಿಗೆ ಕೇವಲ ಆರು ತಿಂಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕಿನ ಕೊಂಡಪ್ಪನಹಳ್ಳಿ ಗ್ರಾಮದ ಚಂದ್ರಶೇಖರ್ ಎಂಬ ಯುವಕನೊಂದಿಗೆ ವಿವಾಹವಾಗಿತ್ತು. ಆರು ತಿಂಗಳು ಸಂಸಾರ ಸುಖವಾಗಿರಬೇಕಿದ್ದ ಈ ಜೋಡಿ ಇಂದು ದುರಂತಕ್ಕೆ ಸಾಕ್ಷಿಯಾಗಿದೆ.

ಆತ್ಮಹತ್ಯೆಗೂ ಮುನ್ನ ಫೇಸ್‌ಬುಕ್‌ನಲ್ಲಿ ಡೆತ್ ನೋಟ್!
ಜಯಶ್ರೀ ಅವರು ಸಾವಿಗೆ ಶರಣಾಗುವ ಮೊದಲು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಡೆತ್ ನೋಟ್ ಬರೆದಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪತಿ ಚಂದ್ರಶೇಖರ್ ಬೇರೆ ಯುವತಿಯ ಜೊತೆಗೆ ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದರು. ಇದನ್ನು ಜಯಶ್ರೀ ಪ್ರಶ್ನಿಸಿದಾಗ, ಪತಿ ಚಂದ್ರಶೇಖರ್ ಅವರಿಂದ ತೀವ್ರವಾದ ಕಿರುಕುಳ ಎದುರಿಸಬೇಕಾಯಿತು. ಪತಿಯ ಈ ಕಿರುಕುಳ ಮತ್ತು ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್‌ನಲ್ಲಿ ಜಯಶ್ರೀ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಪತಿ ಚಂದ್ರಶೇಖರ್ ಅವರೇ ತಮ್ಮ ಸಾವಿಗೆ ನೇರ ಕಾರಣ ಎಂದು ಆರೋಪಿಸಿದ್ದಾರೆ.
