Local News – ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಗ್ರಾಮ ಆಡಳಿತಾಧಿಕಾರಿ ಮುಷ್ಕರದ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳಾಗದೇ ಜನರು ಪರದಾಡುತ್ತಿದ್ದಾರೆ. ಇತ್ತ ತಮ್ಮ ಬೇಡಿಕೆಗಳು ಈಡೇರುವ ತನಕ ತಮ್ಮ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಮೂಲಭೂತ ಸೌಕರ್ಯಗಳು, ಸೇವಾ ಸೌಲಭ್ಯಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕಚೇರಿಯ ಮುಂಭಾಗ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭವಾಗಿ ನಾಲ್ಕು ದಿನಗಳು ಕಳೆದಿದೆ. ತಮ್ಮ ಬೇಡಿಕೆಗಳು ಈಡೇರುವ ತನಕ ಮುಷ್ಕರವನ್ನು ಹಿಂಪಡೆಯುವುದಿಲ್ಲ ಎಂದು ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಮುಷ್ಕರ ಮುಂದುವರೆಸಿದ್ದಾರೆ. ಇನ್ನೂ ಕಂದಾಯ ಇಲಾಖೆಯಲ್ಲಿ ತಮ್ಮ ಕೆಲಸಗಳಾಗದೆ ಸಾರ್ವಜನಿಕರು ಪರದಾಡುವಂತಾಗಿದೆ.

ಈ ಕುರಿತು ದಪ್ಪರ್ತಿ ಗ್ರಾಮದ ಮುಖಂಡ ನಂಜುಂಡಪ್ಪ ಮಾತನಾಡಿ, ನಾವು ಪಹಣಿ ತಿದ್ದುಪಡಿ ಸೇರಿದಂತೆ ವಿವಿಧ ಕೆಲಸಗಳ ನಿಮಿತ್ತ ತಾಲೂಕು ಕಚೇರಿಗೆ ಬಂದರೇ ಇಲ್ಲಿ ಅಧಿಕಾರಿಗಳು ಇಲ್ಲದೇ ನಮ್ಮ ಕೆಲಸಗಳು ನಡೆಯುತ್ತಿಲ್ಲ. ನಾವು ನೌಕರರ ಮುಷ್ಕರಕ್ಕೆ ವಿರೋಧ ಮಾಡುತ್ತಿಲ್ಲ. ಸರ್ಕಾರಗಳು ಗ್ರಾಮ ಆಡಳಿತಾಧಿಕಾರಿಗಳ ಜೊತೆಗೆ ಚರ್ಚಿಸಿ ಅವರ ಮನವೊಲಿಸಿ ಮುಷ್ಕರ ಹಿಂಪಡೆಯುವಂತೆ ಮಾಡಬೇಕು. ಸಾರ್ವಜನಿಕರು, ರೈತರ ಕೆಲಸಗಳು ನಡೆಯಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಗ್ರಾಮ ಆಡಳಿತಾಧಿಕಾರಿಗಳು ಮಾತ್ರ ತಾವು ಈಗಾಗಲೇ ಮೊದಲ ಹಂತದಲ್ಲಿ ಮುಷ್ಕರ ನಡೆಸಿದಾಗ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆ ಭರವಸೆ ಈಡೇರದ ಕಾರಣ 2ನೇ ಹಂತದ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆಗಳು ಈಡೇರುವ ತನಕ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.