Blood Donation – ನಾವು ಏನೆ ಕೆಲಸಗಳನ್ನು ಮಾಡಿದರೂ ಸಹ ಸಮಾಜದಲ್ಲಿ ಉಳಿಯೋದು ಮಾತ್ರ ನಾವು ಮಾಡಿದ ಒಳ್ಳೆಯ ಕೆಲಸಗಳು, ನಾವು ಸತ್ತು ವರ್ಷಗಳು ಕಳೆದರೂ ನಮ್ಮ ಸೇವೆ ಚಿರಕಾಲವಿರುತ್ತದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನಾಗಮಣಿ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಕಸಾಪ, ಪತ್ರಕರ್ತರ ಸಂಘ, ಪಟ್ಟಣ ಪಂಚಾಯತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇತ್ತಿಚಿಗೆ ಮೃತಪಟ್ಟ ಪತ್ರಕರ್ತ ಹಾಗೂ ಕೊರೋನಾ ವಾರಿಯರ್ ಭರತ್ ನೆನಪಿನಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನೇಕರು ತಮ್ಮ ಜೀವನ, ತಮ್ಮ ಕುಟುಂಬಕ್ಕಿಂತ ಹೆಚ್ಚಿನ ಸಮಯವನ್ನು ಸಮಾಜ ಸೇವೆಗಾಗಿ ಮುಡಿಪಾಗಿಡುತ್ತಾರೆ. ನಾವು ಮಾಡುವ ಸಮಾಜ ಸೇವೆಯೇ ಚಿರಕಾಲವಿರುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತ ಭರತ್ ರವರು ತುಂಬಾ ಸಮಾಜ ಸೇವೆ ಮಾಡಿರುವುದಾಗಿ ತಿಳಿದಿದ್ದೇನೆ. ಅವರು ಇಂದು ಜೀವಂತವಾಗಿಲ್ಲದೇ ಇರಬಹುದು ಆದರೆ ಅವರು ಮಾಡಿದ ಕೆಲಸಗಳಲ್ಲಿ ಸದಾ ಜೀವಂತವಾಗಿ ಎಲ್ಲರೊಂದಿಗೆ ಇರುತ್ತಾರೆ. ಅವರಂತೆ ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಂಡು ಸಮಾಜ ಸೇವೆ ಮಾಡಲು ಮುಂದಾಗಬೇಕು ಎಂದರು.

ಬಳಿಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ದಾನಗಳಲ್ಲಿ ಅತ್ಯಂತ ಶ್ರೇಷ್ಟ ದಾನ ರಕ್ತದಾನ. ಇಂದು ಪತ್ರಕರ್ತ ಭರತ್ ರವರ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ತುಂಬಾ ಒಳ್ಳೆಯ ಸಂಗತಿ. ಪತ್ರಕರ್ತರಾಗಿ ತಾಲೂಕಿನ ಅಭಿವೃದ್ದಿಗೆ ಅವರು ಶ್ರಮಿಸಿದ್ದಾರೆ. ರಾಜ್ಯ ಮಟ್ಟದ ವರದಿಗಾರರಾಗಿ ಕೆಲವೊಂದು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಅವರ ಸೇವೆ ಅವಿಸ್ಮರಣೀಯವಾದುದು. ಇನ್ನೂ ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯ ಸಹ ವೃದ್ದಿಯಾಗುತ್ತದೆ. ಅನೇಕರಿಗೆ ರಕ್ತದಾನ ಮಾಡುವುದರಿಂದ ತಪ್ಪು ಕಲ್ಪನೆ ಇರುತ್ತದೆ. ಅದನ್ನು ತೊಡೆದು ಹಾಕಿ ಆರೋಗ್ಯವಂತ ಯುವಕರು ರಕ್ತದಾನಕ್ಕೆ ಮುಂದಾಗಿ ಮತ್ತೊಬ್ಬರ ಜೀವ ಉಳಿಸುವ ಪ್ರಯತ್ನ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಜಿ.ವಿ.ವಿಶ್ವನಾಥ್, ನನ್ನ ಆತ್ಮೀಯ ಸಹೋದರ ಹಾಗೂ ಪತ್ರಕರ್ತ ಭರತ್ ನಿಸ್ವಾರ್ಥ ಬುದ್ದಿಯಿಂದ ಸಮಾಜ ಸೇವೆಯನ್ನು ಮಾಡಿದ್ದಾರೆ. ಅನೇಕರು ಸ್ವಾರ್ಥ ಮನೋಭಾವದಿಂದ ಸಮಾಜ ಸೇವೆ ಮಾಡುವ ಕೆಲಸ ಮಾಡುತ್ತಿರುತ್ತಾರೆ. ಆದರೆ ಭರತ್ ನಿಸ್ವಾರ್ಥವಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಕೋವಿಡ್ ಸಮಯದಲ್ಲಿ ಕೊರೋನಾ ವಾರಿಯರ್ ಆಗಿ ಭರತ್ ಸಹ ಸೇವೆ ಸಲ್ಲಿಸಿದ್ದಾನೆ. ಸರ್ಕಾರದಿಂದ ಕೊರೋನಾ ವಾರಿಯರ್ ಗಳಾಗಿ ಸೇವೆ ಸಲ್ಲಿಸಿದವರಿಗೆ ಪ್ರಮಾಣ ಪತ್ರಗಳು ಬಂದಿದ್ದು, ಅವುಗಳನ್ನು ಒಂದು ಕಾರ್ಯಕ್ರಮ ಮಾಡಿ ಕೊಡಬೇಕು ಎಂದು ಭರತ್ ಹೇಳಿದ್ದ. ಆದರೆ ಭರತ್ ಇಲ್ಲದ ಕಾರ್ಯಕ್ರಮದಲ್ಲಿ ನಾವು ಈ ಪ್ರಮಾಣ ಪತ್ರಗಳನ್ನು ವಿತರಣೆ ಮಾಡುತ್ತಿದ್ದೇವೆ ಇದು ತುಂಬಾ ನೋವಿನ ಸಂಗತಿಯಾಗಿದೆ ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಪ.ಪಂ ಅಧ್ಯಕ್ಷ ವಿಕಾಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ ಸೇರಿದಂತೆ ಹಲವರು ಮಾತನಾಡಿದರು. ಇದೇ ಸಮಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕೋವಿಡ್ ಸಮಯದಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ಕೆಲಸ ಮಾಡಿದ ಸ್ವಯಂ ಸೇವಕರಿಗೆ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಇನ್ನೂ ಶಿಬಿರದಲ್ಲಿ ಒಟ್ಟು 53 ಯೂನಿಟ್ ಗಳಷ್ಟು ರಕ್ತ ಸಂಗ್ರಹವಾಯಿತು.

ಈ ವೇಳೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಕಾರ್ಯದರ್ಶಿ ವಕೀಲ ಉನ್ನತಿ ವಿಶ್ವನಾಥ್, ಟಿ.ಹೆಚ್.ಒ ಡಾ. ನರಸಿಂಹಮೂರ್ತಿ, ತಾಲೂಕು ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಮುನಿಕೃಷ್ಣಪ್ಪ, ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ. ಜ್ಯೋತಿ, ಡಾ. ರಂಗವೇಣಿ, ಐಟಿಐ ಕಾಲೇಜಿನ ಉಪನ್ಯಾಸಕ ಶ್ರೀ ಸ.ನ. ನಾಗೇಂದ್ರ, ಪತ್ರಕರ್ತ ಭರತ್ ರವರ ತಂದೆ ಶಂಕರ್, ಪತ್ನಿ ಲಾವಣ್ಯ ಭರತ್, ನಿವೃತ್ತ ಉಪನ್ಯಾಸಕರ ಬಿ ಅಮೀರ್ ಜಾನ್, ಭಾರತೀಯ ರೆಡ್ ಕ್ರಾಸ್ ಜಿಲ್ಲಾ ರಕ್ತ ನಿಧಿ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ವರದರಾಜ್, ವಾಹಿನಿ ಸಂಸ್ಥೆಯ ಸುರೇಶ್, ಜಯ ಕರ್ನಾಟಕ ಸಂಘಟನೆಯ ಬುಲೆಟ್ ಶ್ರೀನಿವಾಸ್, ಸಾರ್ವಜನಿಕ ಆಸ್ಪತ್ರೆ ಐಟಿಸಿಟಿ ಆಪ್ತ ಸಮಾಲೋಚಕ ಸುಧರ್ಮನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಫ್ರೀದ್ ಖಾನ್, ಗುಡಿಬಂಡೆ ತಾಲೂಕಿನ ರೆಡ್ ಕ್ರಾಸ್ ಪದಾಧಿಕಾರಿಗಳು, ಯೂತ್ ರೆಡ್ ಕ್ರಾಸ್ ನ ಅಧಿಕಾರಿಗಳು ಸೇರಿದಂತೆ ಹಲವರು ಹಾಜರಿದ್ದರು.