Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಗಂಗಿರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ನರಸಿಂಹರೆಡ್ಡಿಯವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಪ್ರೇಮ್ ಕುಮಾರ್ ತಿಳಿಸಿದರು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗಂಗಿರೆಡ್ಡಿ ಮತ್ತು ಅಶೋಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನರಸಿಂಹರೆಡ್ಡಿ ಮತ್ತು ನಂಜುಂಡಪ್ಪ ರವರು ನಾಮಪತ್ರ ಸಲ್ಲಿಸಿದ್ದು, ಒಟ್ಟು 13 ಮತಗಳ ಪೈಕಿ ಗಂಗಿರೆಡ್ಡಿ ಮತ್ತು ನರಸಿಂಹರೆಡ್ಡಿ 7 ಮತಗಳ ಪಡೆಯುವುದರ ಮೂಲಕ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಘೋಷಿಸಿದರು.

ನಾಮಪತ್ರ ಹರಿದು ಆಕ್ರೋಶ : ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಕಾಂಗ್ರೆಸ್ ಮತ್ತು ಎನ್.ಡಿ.ಎ.ಬೆಂಬಲಿತ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಉಂಟಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಅಶೋಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನಂಜುಂಡಪ್ಪರವರು ಸೋಲುವ ಭೀತಿಯಲ್ಲಿ ತಮ್ಮ ನಾಮಪತ್ರಗಳನ್ನು ಹರಿದುಹಾಕಿ ಗಲಾಟೆ ಮಾಡಲು ಮುಂದಾಗಿದ್ದರು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ಹತೋಟಿಗೆ ತಂದು ಸುಗಮ ಚುನಾವಣೆ ಮಾಡಲು ಅವಕಾಶ ಮಾಡಿಕೊಟ್ಟರು.

ಎನ್.ಡಿ.ಎ.ಅಭ್ಯರ್ಥಿ ಸಂಭ್ರಮಾಚರಣೆ : ಇನ್ನು ಚುನಾವಣೆಯಲ್ಲಿ ಎನ್.ಡಿ.ಎ.ಅಭ್ಯರ್ಥಿ ಅಧ್ಯಕ್ಷ ಸ್ಥಾನಕ್ಕೆ ಗಂಗಿರೆಡ್ಡಿ ಆಯ್ಕೆಯಾಗಿದ್ದು, ಕ್ಷೇತ್ರರದ ಎನ್.ಡಿ.ಎ ಮೈತ್ರಿಕೂಟದ ಮುಖಂಡ ಹರಿನಾಥ್ ರೆಡ್ಡಿ ಅಧ್ಯಕ್ಷರನ್ನು ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಹಂಪಸಂದ್ರ ಡೈರಿಯಲ್ಲಿ ನಮ್ಮ ಎನ್.ಡಿ.ಎ. ಬೆಂಬಲಿತ ಅಭ್ಯರ್ಥಿ ಗಂಗಿರೆಡ್ಡಿ ಆಯ್ಕೆಯಾಗಿರುವುದು ಸಂತಸ ತಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಡೈರಿಗಳಲ್ಲಿ ನಮ್ಮ ಬೆಂಬಲಿತರನ್ನು ಗೆಲ್ಲಿಸಲು ಶ್ರಮಿಸುವುದಾಗಿ ಹಾಗೂ ಎನ್.ಡಿ.ಎ ಬೆಂಬಲಿತ ಅಭ್ಯರ್ಥಿಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಬಳಿಕ ನೂತನವಾಗಿ ಹಂಪಸಂದ್ರ ಡೈರಿಯ ಅಧ್ಯಕ್ಷರಾಗಿ ಆಯ್ಕೆಯಾದ ಗಂಗಿರೆಡ್ಡಿ ಮಾತನಾಡಿ, ನನಗೆ ಮತ ನೀಡಿ ಗೆಲ್ಲಿಸಿದ ಎಲ್ಲಾ ನಿರ್ದೇಶಕರಿಗೂ ಧನ್ಯವಾದಗಳನ್ನು ಸಲ್ಲಿಸಿ ಮುಂದಿನ ದಿನಗಳಲ್ಲಿ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಡೈರಿ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ತಿಳಿಸಿದರು.