Krushika Samaja – 2025-26 ರಿಂದ 2029-30ನೇ ಸಾಲಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಚುನಾವಣೆ ಘೋಷಣೆ ಮಾಡಿದ್ದು, ತಾಲೂಕಿನ ಕೃಷಿಕ ಸಮಾಜದಲ್ಲಿ 15 ಕಾರ್ಯಕಾರಿ ಸಮಿತಿಗೆ 18 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಮೂರು ಮಂದಿ ನಾಮಪತ್ರಗಳನ್ನು ಹಿಂಪಡೆದ ಕಾರಣದಿಂದ 15 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಕೇಶವರೆಡ್ಡಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಚುನಾವಣಾಧಿಕಾರಿ ಕೇಶವರೆಡ್ಡಿ, ಸುಮಾರು ವರ್ಷಗಳಿಂದ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿರಲಿಲ್ಲ. ಇದೀಗ ಚುನಾವಣೆ ಘೋಷಣೆ ಮಾಡಲಾಗಿತ್ತು. ಅದರಂತೆ ಚುನಾವಣಾ ಅಧಿಸೂಚನೆಯಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸಹ ನಡೆಸಲಾಗಿತ್ತು. ಒಟ್ಟು 15 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರ ಸ್ಥಾನಗಳಿಗೆ 18 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದರು. ಈ ಪೈಕಿ ಜಿ.ಟಿ.ವೆಂಕೇಶ್, ಹೆಚ್.ಸಿ.ಕಮಲಮ್ಮ ಹಾಗೂ ವೈ.ಆರ್.ರಂಗಾರೆಡ್ಡಿ ರವರು ನಾಮಪತ್ರಗಳನ್ನು ವಾಪಸ್ಸು ಪಡೆದ ಕಾರಣದಿಂದ ಉಳಿದವರು 2025-26 ರಿಂದ 2029-30ನೇ ಸಾಲಿನ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ 31 ರಂದು 11 ಗಂಟೆಗೆ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಹಾಗೂ ಜಿಲ್ಲಾ ಪ್ರತಿನಿಧಿಯನ್ನು ಚುನಾವಣೆ ಮೂಲಕ ಆಯ್ಕೆಮಾಡಲು ದಿನಾಂಕ ನಿಗದಿ ಮಾಡಲಾಗಿದ್ದು, ಎಲ್ಲಾ ಸದಸ್ಯರಿಗೆ ನೋಟಿಸ್ ನೀಡಲಾಗುವುದೆಂದು ತಿಳಿಸಿದರು.
ಅವಿರೋಧವಾಗಿ ಆಯ್ಕೆಯಾದ ಸದಸ್ಯರು: ಕೊಂಡರೆಡ್ಡಿಹಳ್ಳಿ ಗ್ರಾಮದ ಎಂ.ಸಿ.ಚಿಕ್ಕನರಸಿಂಹಪ್ಪ, ಗುಡಿಬಂಡೆ ಪಟ್ಟಣದ ಬಿ.ಎ.ರಾಜೇಶ್, ಜಿ.ಕೆ.ಜಗನ್ನಾಥ್, ಜಿ.ಲಕ್ಷ್ಮೀ ಪತಿ, ಹಳೇಗುಡಿಬಂಡೆ ಹೆಚ್.ಎನ್.ಮಂಜುನಾಥ್, ಚಿಕ್ಕತಮ್ಮನಹಳ್ಳಿ ಪಿ.ಎನ್.ವೇಣುಗೋಪಾಲ, ನಿಲುಗುಂಬ ಬಿ.ಗಂಗಿರೆಡ್ಡಿ, ಕಡೇಹಳ್ಳಿ ನಾರಾಯಣಚಾರಿ, ಎಲ್ಲೋಡು ನಾಗಭೂಷಣರೆಡ್ಡಿ, ಬುಳ್ಳಸಂದ್ರ ಬಿ.ಎಸ್.ಅಶ್ವತ್ಥನಾರಾಯಣಪ್ಪ, ಚೌಟಕುಂಟಹಳ್ಳಿ ಸಿ.ಜಿ.ಕೃಷ್ಣಪ್ಪ, ಕಾಲುವಗಡ್ಡಹಳ್ಳಿ ಜಿ.ಎನ್.ಸೀತಾರಾಮರೆಡ್ಡಿ, ಮೇಡಿಮಾಕಲಹಳ್ಳಿ ಎಂ.ಪಿ.ಲಕ್ಷ್ಮೀನಾರಾಯಣರೆಡ್ಡಿ, ಬೆಣ್ಣೆಪರ್ತಿ ಅಶ್ವತ್ಥಪ್ಪ, ಮಲ್ಲೇನಹಳ್ಳಿ ಈಶ್ವರಪ್ಪ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನು ಈ ವೇಳೆ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಎಲ್ಲೋಡು ನಾಗಭೂಷಣರೆಡ್ಡಿ ಮಾತನಾಡಿ, ಈಗಾಗಲೇ ಆಯ್ಕೆಯಾಗಿರುವ ಬಹುತೇಕ ಸದಸ್ಯರು ಎನ್.ಡಿ.ಎ ಬೆಂಬಲಿತ ಅಭ್ಯರ್ಥಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೃಷಿ ಇಲಾಖೆಯ ಅಭಿವೃದ್ದಿಗೆ ಹಾಗೂ ರೈತರಿಗೆ ಸಿಗಬೇಕಾದ ಸವಲತ್ತುಗಳನ್ನು ತ್ವರಿತಗತಿಯಲ್ಲಿ ತಲುಪಿಸುವಂತಹ ಕೆಲಸ ಮಾಡುತ್ತೇವೆಂದು ತಿಳಿಸಿದರು.