ಗುಡಿಬಂಡೆ: ಪಟ್ಟಣದ ಶ್ರೀ ತ್ರಿಮತಾಚಾರ್ಯ ಗಾಯತ್ರಿ ಮಂದಿರದ 36 ನೇ ವಾರ್ಷಿಕೋತ್ಸವವನ್ನು ಕಳೆದ ಐದು ದಿನಗಳಿಂದ ಶೃದ್ಧಾಪೂರ್ವಕವಾಗಿ ಆಚರಿಸಲಾಯಿತು. ಐದು ದಿನಗಳಿಂದ ಪ್ರತಿದಿನ ಮಹಾಗಣಪತಿ ಹೋಮ, ಗುರುಪಾದುಕಾ ಹೋಮ, ಮೃತ್ಯುಂಜಯ ಹೋಮ, ರುದ್ರಹೋಮ, ಧನ್ವಂತರಿ ಹೋಮ, ಚಕ್ರಾತ್ಚನೆ, ಸೌಂದರ್ಯ ಲಹರಿ ಪಾರಾಯಣ, ಮಹಾಚಂಡಿಕಾ ಹೋಮ, ಸಾಮೂಹಿಕ ಉಪನಯನ ಮೊದಲಾದ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.
ವೇದ ಬ್ರಹ್ಮಶ್ರೀ ಸ.ನ.ನಾಗೇಂದ್ರ ಹಾಗೂ ಶ್ರೀಹರಿಶರ್ಮ ಹಾಗೂ ಆಗಮಿಕರ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ನಡೆದವು. ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಯ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ದೇವಾಲಯ ದ ಮುಖ್ಯಸ್ಥ ಸ.ನ.ನಾಗೇಂದ್ರ ಮಾತನಾಡಿ 36 ವರ್ಷಗಳಿಂದ ಜಾತಿ ಧರ್ಮರಹಿತವಾಗಿ ಪ್ರತಿವರ್ಷ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಈ ಐದು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ ಅನ್ನದಾಸೋಹವನ್ನು ಮಾಡಲಾಗುತ್ತಿದೆ. ಪ್ರಪಂಚದ ಎಲ್ಲರೂ ಸುಖವಾಗಿರಲಿ ಎಂಬ ಧ್ಯೇಯದೊಂದಿಗೆ ನಡೆಸಲಾಗುವ ಈ ಕಾರ್ಯಕ್ರಮ ಮುಂದೆಯೂ ಯಶಸ್ವಿಯಾಗಿ ನಡೆಯಲಿ ಎಂದು ತಿಳಿಸಿದರು.
ಈ ಪ್ರತಿದಿನ ಸಂಜೆ ಸಾಂಸ್ಕೃತಿಕ, ಧಾಮಿಕ, ಉಪನ್ಯಾಸ, ಭರತನಾಟ್ಯ, ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಶ್ವ ದಾಖಲೆ ಮಾಡಿರುವ ಬೆಂಗಳೂರು ಶೃತಿ ಸಿಂಧೂರ ತಂಡದ ಕಲಾವಿದರು ತಾಳವಾದ್ಯ ಕಛೇರಿ, ವಿದುಷಿ ಡಾ. ರೇವತಿ ಕಾಮತ್ ಮತ್ತು ವೃಂದದವರಿಂದ ವೀಣಾವಾದನ ಸಂಗೀತ ಲಹರಿ, ಬೆಂಗಳೂರಿನ ಮಲ್ಲೇಶ್ವರಂನ ನಾಟ್ಯಾರಾಧನ ಭರತನಾಟ್ಯ ಶಾಲೆಯ ತಂಡದ ನೃತ್ಯೋಪಾಸನೆ ಭರತನಾಟ್ಯ, ಬೆಂಗಳೂರು ಯಲಹಂಕ ಅರ್ಥ ನೃತ್ಯ ಕಲಾ ಮಂದಿರ ತಂಡದಿಂದ ನಡೆಸಿಕೊಟ್ಟ ನವದುರ್ಗಾ ವೈಭವ ನೃತ್ಯ ರೂಪಕ ಪ್ರದರ್ಶನ ನೋಡುಗರ ಮನಸೆಳೆಯಿತು. ವೇದ ಬ್ರಹ್ಮ ಶ್ರೀ ಮಂಕಾಲ ಶ್ರೀಹರಿಶರ್ಮ ರವರಿಂದ ಗಾಯತ್ರಿ ವೈಭವ ಉಪನ್ಯಾಸ ನಡೆಸಿಕೊಟ್ಟರು.
ಈ ಕಾರ್ಯಕ್ರಮವು ದೇವಾಲಯದ ಮುಖ್ಯಸ್ಥ ವೇದ ಬಹ್ಮ ಶ್ರೀ ಸ.ನ. ನಾಗೇಂದ್ರ, ಅರ್ಚಕ ಗುರು ಪ್ರಸಾದ್, ಡಾ.ಗಿರೀಶ್ ರಾವ್, ವೇದ ಬ್ರಹ್ಮ ಮಂಜುನಾಥ, ಗು.ನ. ನಾಗೇಂದ್ರ, ಸುಬ್ರಹ್ಮಣ್ಯ ಶಾಸ್ತ್ರಿ, ಡಾ. ಗಿರೀಶ್ ರಾವ್, ನಿವೃತ್ತ ಡಿವೈಎಸ್ಪಿ ಶಾಂತಕುಮಾರ್, ಗುಡಿಬಂಡೆ ಶ್ರೀಮಾತ ಗಾಯತ್ರಿ ಸೇವಾ ಟ್ರಸ್ಟ್ ಸದಸ್ಯರು, ಮೊದಲಾದವರ ನೇತೃತ್ವದಲ್ಲಿ ನಡೆಯಿತು.