ಬಾಗೇಪಲ್ಲಿ: ಪರಿಶಿಷ್ಠ ಜಾತಿಯ ಒಳ ಮೀಸಲಾತಿಗಾಗಿ ಕಳೆದ 30 ವರ್ಷಗಳ ನಿರಂತರವಾಗಿ ನಡೆದ ಹೋರಾಟಕ್ಕೆ ಸುಪ್ರೀಂ ಕೋರ್ಟ್‍ನ ಏಳು ನ್ಯಾಯಾಧೀಶರ ಪೀಠ ನೀಡಿರುವ ತೀರ್ಪಿನಿಂದ ಜಯಸಿಕ್ಕಿದೆ ನ್ಯಾಯಾಲಯದ ಈ ತೀರ್ಪುನ್ನು ಸ್ವಾಗತಿಸುವುದಾಗಿ ದಲಿತ ಮುಖಂಡ ಬಿ.ವಿ.ವೆಂಕಟರವಣ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪರಿಶಿಷ್ಠ ಜಾತಿಯಲ್ಲಿ 101 ಉಪಜಾತಿಗಳಿವೆ, ಈ ಜಾತಿಗಳಲ್ಲಿ ತುಳಿತಕ್ಕೊಳಗಾಗಿರುವ ಹೊಲಯ, ಮಾದಿಗರಿಗೆ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿಯನ್ನು ಕಲ್ಪಿಸಿದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತೆ ಎಂದರು.
ಒಳ ಮೀಸಲಾತಿಗಾಗಿ ಮಂದಕೃಷ್ಣ ಮಾದಿಗ ರವರು 1994ರಲ್ಲಿ ಆಂದ್ರಪ್ರದೇಶದಲ್ಲಿ ಪ್ರಾರಂಭವಾದ ಹೋರಾಟ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹೋರಾಟ ನಡೆಸಿದ ಫಲವಾಗಿ ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವ ಮೂಲಕ ನ್ಯಾಯ ಸಿಕ್ಕಿದೆ, ಮಾದಿಗ ಸೇರಿದಂತೆ ವಿವಿಧ ಸಂಘಟನೆಗಳ ನಾಯಕರ ಹೋರಾಟದ ಫಲವಾಗಿದೆ ಎಂದ ಅವರು ಈ ಹಿಂದೆ ಮೀಸಲಾತಿಯಲ್ಲಿ ಅನೇಕ ಜಾತಿಗಳು ಸೇರ್ಪಡೆಯಿಂದ ಕೆಲವರಿಗೆ ಮಾತ್ರ ಮೀಸಲಾತಿಯ ಲಾಭ ಪಡೆಯುತ್ತಿದ್ದರು ಅದಕ್ಕೆ ಈಗ ಕಡಿವಾಣ ಹಾಕಿದಂತಾಗಿದೆ ಮುಂದಿನ ದಿನಗಳಲ್ಲಿ ಸಣ್ಣ ಉಪಜಾತಿಗಳು ಸಹ ಮೀಸಲಾತಿಯ ಲಾಭ ಪಡೆಯಬಹುದಾಗಿದೆ ಎಂದರು.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ತಕ್ಷಣ ಒಳ ಮೀಸಲಾತಿಗೆ ಆದೇಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಕಡ್ಡೀಲು ವೆಂಕಟರವಣ, ಜಯಂತ್, ಆದಿನಾರಾಯಣ, ನರಸಿಂಹಪ್ಪ, ವೆಂಕಟೇಶ್, ಸತೀಶ್, ಶಿವಪ್ಪ, ನಾಗಪ್ಪ, ಗೋಪಿ, ನಂಜುಂಡಪ್ಪ, ಈರಪ್ಪ, ಮಂಜು, ಕೆ.ಬಿ.ವೆಂಕಟರವಣ, ಬಾಬು ಮತ್ತಿತರರು ಇದ್ದರು.