ಡ್ರೈ ಐಸ್ ತಿಂದ ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಆಕಸ್ಮಿಕವಾಗಿ ಡ್ರೈ ಐಸ್ ತಿಂಬ ಬಾಲಕ ಮೃತಪಟ್ಟಿದ್ದಾನೆ. ರಾಜೇಂದಾಂಗ್ ಪ್ರದೇಶದಲ್ಲಿ ಕುಶಾಂತ್ ಸಾಹು ಎಂಬ ವ್ಯಕ್ತ ತಮ್ಮ ಮೂರು ವರ್ಷದ ಮಗು ಹಾಗೂ ಕುಟುಂಬದೊಂದಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕುಶಾಂತ್ ಸಾಹು ಎಂಬಾತನ ತನ್ನ ಕುಟುಂಬದೊಂದಿಗೆ ರಾಜೆಂದಾಂಗ್ ವ್ಯಾಪ್ತಿಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಮದುವೆ ಸಮಾರಂಭದಲ್ಲಿ ಈವೆಂಟ್ ಮ್ಯಾನೇಜ್ ಮೆಂಟ್ ನವರು ಸ್ಪೆಷಲ್ ಎಫೆಕ್ಟ್ ಗಾಗಿ ಅಲ್ಲಲ್ಲಿ ಡ್ರೈ ಐಸ್ ಇಟ್ಟಿದ್ದರು. ಆದರೆ ಮೂರು ವರ್ಷದ ಪುಟಾಣಿ ಮಗು ಅದನ್ನು ಐಸ್ ಕ್ರೀಂ ಎಂದು ಭಾವಿಸಿ ತಿಂದಿದ್ದಾನೆ. ಡ್ರೈ ಐಸ್ ತಿಂದ ಬಾಲಕ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಕುಟುಂಬಸ್ಥರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತೀಚಿಗೆ ಗುರುಗ್ರಾಮ್ ನ ಕೆಫೆಯೊಂದರಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಡ್ರೈ ಐಸ್ ಸೇವಿಸಿದ ಐದು ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಆ ಘಟನೆಯಲ್ಲಿ ಸಂತ್ರಸ್ತರ ಬಾಯಿ ಸುಟ್ಟು, ರಕ್ತ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದರು. ಇದೀಗ ಪುಟಾಣಿ ಮಗು ಡ್ರೈ ಐಸ್ ತಿಂದು ಮೃತಪಟ್ಟಿದೆ. ಆದ್ದರಿಂದ ಡ್ರೈ ಐಸ್ ತಿನ್ನಲು ಯಾರು ಹೋಗಬಾರದು.
ಇನ್ನೂ ಡ್ರೈ ಐಸ್ ಎಂದರೇನು ಎಂಬ ವಿಚಾರಕ್ಕೆ ಬಂದರೇ, ಇಂಗಾಲ ಡೈ ಆಕ್ಸೈಡ್ ನ ಘನ ರೂಪವೇ ಡ್ರೈ ಐಸ್. ಸಾಮಾನ್ಯ ಐಸ್ ಅಥವಾ ಮಂಜುಗಡ್ಡೆ ನೀರನ್ನು ಕನಿಷ್ಟ ತಾಪಮಾನದಲ್ಲಿಟ್ಟು ತಯಾರಿಸಲಾಗುತ್ತದೆ. ಆದರೆ ಈ ಡ್ರೈ ಐಸ್ ಗಳನ್ನು ಇಂಗಾಲ ಡೈ ಆಕ್ಸೈಡ್ -78.5 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿರಿಸಿ ತಯಾರು ಮಾಡಲಾಗುತ್ತದೆ. ಸಾಮಾನ್ಯ ಮಂಜುಗಡ್ಡೆಯು ಘನದಿಂದ ದ್ರವ ರೂಪಕ್ಕೆ ಬಂದರೇ ಈ ಡ್ರೈ ಐಸ್ ಗಳು ಮಾತ್ರ ಘನರೂಪದಿಂದ ಅನೀಲ ರೂಪಕ್ಕೆ ಬದಲಾಗುತ್ತದೆ. ಈ ಡ್ರೈ ಐಸ್ ಗಳು ಶಿಥಿಲೀಕರಣ ಸೇರಿದಂತೆ ವೈದ್ಯಕೀಯ ಕ್ಷೇತ್ರಗಳಲ್ಲಿ, ತಂಪು ಪಾನಿಯಗಳು ಹಾಗೂ ಐಸ್ ಕ್ರೀಂ ತಯಾರಿಕೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಈ ಡ್ರೈ ಐಸ್ ಗಳು ತುಂಬಾನೆ ಅಪಾಯಕಾರಿಯಾಗಿದೆ. ಒಂದು ವೇಳೆ ತಿಳಿಯದೇ ಡ್ರೈ ಐಸ್ ತಿಂದರೇ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕಿದೆ.