ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ (Nagamangala) ಕಳೆದ ರಾತ್ರಿ ಗಣಪತಿ ಮೂರ್ತಿ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿದ್ದು, ಈ ಘಟನೆಯಲ್ಲಿ ಪೊಲೀಸರಿಗೆ ಗಾಯಗಳಾಗಿವೆ. ದುಷ್ಕರ್ಮಿಗಳು ಕೆಲವು ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, 144 ಸೆಕ್ಷನ್ ಜಾರಿಯಲ್ಲಿದೆ ಎಂದು ತಿಳಿದು ಬಂದಿದೆ. ಈ ಘಟನೆಯಿಂದ ನಾಗಮಂಗಲ ಪಟ್ಟಣದಲ್ಲಿ ಪ್ರಕ್ಷುಬ್ದ ವಾತವರಣ ನಿರ್ಮಾಣವಾಗಿದೆ.
ನಾಗಮಂಗಲ ಪಟ್ಟಣದ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಗಣಪತಿ ವಿಸರ್ಜನೆಗೂ ಮುನ್ನಾ ಮೆರವಣಿಗೆ ನಡೆಯುತ್ತಿದ್ದ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಕಾರಣದಿಂದ ಹಿಂದೂ-ಮುಸ್ಲೀಂ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಕಲ್ಲು ತೂರಾಟ ಮಾಡಿ, ಬಾಟಲಿಗಳನ್ನು ಎಸೆದ ಪರಿಣಾಮ 8 ಮಂದಿ ಹಿಂದೂ ಕಾರ್ಯಕರ್ತರಿಗೆ ಗಾಯಗಳಿವೆ. ಜೊತೆಗೆ ಪೊಲೀಸ್ ಪೇದೆಗೂ ಗಾಯಗಳಾಗಿವೆ ಎನ್ನಲಾಗಿದೆ. ಇನ್ನೂ ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ನಾಲ್ಕೈದು ಬಾರಿ ಲಾಠಿ ಪ್ರಹಾರ ನಡೆಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಡೆಯುತ್ತಿದ್ದಾರೆ.
ಇನ್ನೂ ಈ ಘಟನೆಯ ಸಂಬಂಧ ಮೂರು ದಿನಗಳ ಕಾಲ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ. ಗಣೇಶ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿದೆ. ಕೆಲವು ಅಂಗಡಿ ಮತ್ತು ಬೈಕ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಈ ವೇಳೆ ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ. ಎಲ್ಲೆಡೆ ಭದ್ರತೆ ನೀಡಿದ್ದೇವೆ. ಪರಿಸ್ಥಿತಿ ಹತೋಟಿಗೆ ಬಂದಿದ್ದು, ಮೂರು ದಿನಗಳ ಕಾಲ 144 ಸೆಕ್ಷನ್ ಜಾರಿ ಮಾಡಲಾಗಿದೆ. ಗಲಾಟೆಯ ಸಮಯದಲ್ಲಿ ಮಚ್ಚು, ಲಾಂಗ್, ಪೆಟ್ರೋಲ್ ಬಾಂಬ್ ಬಳಸಿರುವ ಬಗ್ಗೆ ಮಾಹಿತಿಯಿಲ್ಲ. ಈ ಘಟನೆಯ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗುತ್ತಿದೆ ಎಂದು ಐಜಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ.
ಇನ್ನೂ ಕಳೆದ ವರ್ಷವೂ ನಾಗಮಂಗಲದಲ್ಲಿ ಗಣೇಶ ಉತ್ಸವದ ವೇಳೆ ಈ ರೀತಿಯ ಸಂಘರ್ಷ ನಡೆದಿತ್ತು. ಕಳೆದ ವರ್ಷ ಗಣೇಶ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಬಳಿಕ ಪೊಲೀಸರು ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಇನ್ನೂ ನಿನ್ನೆಯಷ್ಟೆ ನಡೆದ ಗಲಬೆಯಲ್ಲಿ ಸ್ಥಳೀಯ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಕೆಲ ಕಿಡಿಗೇಡಿಗಳು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಜೊತೆಗೆ ಮಾಜಿ ಶಾಸಕ ಸುರೇಶ್ ಗೌಡ ನಿವಾಸಕ್ಕೂ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ಕಾರಣದಿಂದ ಕೆಲ ಬಡ ವ್ಯಾಪಾರಿಗಳು ನಷ್ಟ ಅನುಭವಿಸಿದ್ದಾರೆ.