ಸಚಿವ ಜಮೀರ್ ಅಹ್ಮದ್ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರವರಿಗೆ ವಕ್ಫ್ ಆಸ್ತಿಯ ವಿಚಾರದ ಹೇಳಿಕೆ ವಿರುದ್ದ ತಿರುಗೇಟು ನೀಡಿದ್ದಾರೆ. ವಕ್ಫ್ ಆಸ್ತಿ ಯತ್ನಾಳ್ ಅವರ ತಂದೆಯ ಆಸ್ತಿಯೂ ಅಲ್ಲ ಅಥವಾ ನಮ್ಮ ತಂದೆ ಆಸ್ತಿಯೂ ಅಲ್ಲ ಎಂದು ಬೀದರ್ ನಲ್ಲಿ ಸಚಿವ ಜಮೀರ್ ತಿಳಿಸಿದ್ದಾರೆ.
ಸಚಿವ ಜಮೀರ್ ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಕ್ಫ್ ಆಸ್ತಿ ರದ್ದು ಪಡಿಸಬೇಕೆಂದು ಯತ್ನಾಳ್ ಪ್ರಧಾನಿಗೆ ಬರೆದ ಪತ್ರದ ವಿಚಾರಕ್ಕೆ ಸಂಬಂಧಿಸಿದಂತೆ ರಿಯಾಕ್ಟ್ ಆಗಿದ್ದಾರೆ. ವಕ್ಫ್ ಆಸ್ತಿ ಜನರು ಹಾಗೂ ದಾನಿಗಳಿಂದ ಬಂದಂತಹ ಆಸ್ತಿಯಾಗಿದೆ. ಅದು ಯತ್ನಾಳ್ ಅವರ ತಂದೆಯ ಆಸ್ತಿಯೂ ಅಲ್ಲ, ನಮ್ಮ ತಂದೆಯ ಆಸ್ತಿಯೂ ಅಲ್ಲ. ಈ ರೀತಿಯಾಗಿ ಮುಸಲ್ಮಾನರ ಬಗ್ಗೆ ಮಾತನಾಡಿದರೇ ಬೇರೆಯವರು ಖುಷಿ ಪಡುತ್ತಾರೆ ಎಂದು ಯತ್ನಾಳ್ ತಿಳಿದುಕೊಂಡಿದ್ದಾರೆ. ಯತ್ನಾಳ್ ಗೆ ಹಿಂದೂಗಳೂ ಬೇಕಿಲ್ಲ, ಮುಸ್ಲೀಂರೂ ಬೇಕಿಲ್ಲ, ಅವರಿಗೆ ಬೇಕಾಗಿರುವುದು ರಾಜಕೀಯ ಮಾತ್ರ. ವಕ್ಫ್ ಆಸ್ತಿ ಕಂದಾಯ ಇಲಾಖೆ ನೀಡಿದ ಆಸ್ತಿಯಲ್ಲ. ಅದನ್ನು ಯತ್ನಾಳ್ ಮೊದಲು ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ವಕ್ಪ್ ಬೋರ್ಡ್ ಗೆ ಆಸ್ತಿ ನೀಡಿದ್ದರೇ ಅದನ್ನು ವಾಪಸ್ ಪಡೆಯಲು ಅವಕಾಶ ಇರುತ್ತದೆ. ಸಮಾಜಕ್ಕೆ ಹಾಗೂ ಬಡವರಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ದಾನಿಗಳು ಜಾಗ ಕೊಟ್ಟಿದ್ದಾರೆ ಎಂದಿದ್ದಾರೆ.
ಇನ್ನೂ ರಾಜ್ಯದಲ್ಲಿ ಒಟ್ಟು 37 ಸಾವಿರ ಎಕರೆ ವಕ್ಫ್ ಜಮೀನಿದ್ದು, ಈ ಪೈಕಿ 4750 ಎಕರೆಯಷ್ಟು ಜಮೀನು ಒತ್ತುವರಿಯಾಗಿದೆ. ಆದ್ದರಿಂದ ನಾನು ಬೀದರ್ ನಿಂದಲೇ ವಕ್ಫ್ ಅದಾಲತ್ ಮಾಡುತ್ತಿದ್ದೇನೆ. ಇದು ರಾಜ್ಯದಾದ್ಯಂತ ನಡೆಯಲಿದೆ. 1956 ರಲ್ಲಿ ನೆಹರು ವಕ್ಫ್ ಕಾಯ್ದೆ ಜಾರಿ ಮಾಡಿದ್ದು. ಪ್ರಧಾನಿಗೆ ಪತ್ರ ಬರೆದರೂ ಅದನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂಬುದನ್ನು ಯತ್ನಾಳ್ ತಿಳಿದುಕೊಳ್ಳಬೇಕೆಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಡಿಸಿಎಂ ಹುದ್ದೆಯ ಬಗ್ಗೆ ಸಹ ಮಾತನಾಡಿದ್ದಾರೆ. ನಮ್ಮ ಪಕ್ಷ ಹೈಕಮಾಂಡ್ ಪಕ್ಷವಾಗಿದ್ದು ಈಗಾಗಲೇ ನಾನು ಮತ್ತು ರಹೀಂಖಾನ್ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಇನ್ನೂ ಡಾ.ಜಿ ಪರಮೇಶ್ವರ್, ರಾಜಣ್ಣ, ಸತೀಶ್ ಜಾರಕಿಹೊಳಿ ಹಾಗೂ ಎಂ.ಬಿ ಪಾಟೀಲ್ ಕೂಡ ಅವರ ಅಭಿಪ್ರಾಯಗಳನ್ನು ಹೇಳಿದ್ದು, ಅಂತಿಮವಾಗಿ ಡಿಸಿಎಂ ಮಾಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.