ರಜೆಗಳು ಬಂದರೇ ಸಾಕು ಅನೇಕರು ವಿಶ್ರಾಂತಿ ಪಡೆಯಲು ಹಾಗೂ ಮನರಂಜನೆಗಾಗಿ ಪ್ರವಾಸಗಳನ್ನು ಕೈಗೊಳ್ಳುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ರೆಸಾರ್ಟ್‌ಗಳತ್ತ ಹೆಚ್ಚು ಜನರು ಹೋಗುತ್ತಿರುತ್ತಾರೆ. ಈ ಹಾದಿಯಲ್ಲೇ ಭಾನುವಾರದ ರಜೆಯನ್ನು ಕಳೆಯಲು ಸ್ನೇಹಿತರೊಂದಿಗೆ ತೆರಳಿದ್ದ ಮಹಿಳೆಯೊಬ್ಬಳು ದುರ್ಮರಣ ಹೊಂದಿದ್ದಾಳೆ. ರೆಸಾರ್ಟ್‌ನಲ್ಲಿ ಜಿಪ್ ಲೈನ್ ತುಂಡಾಗಿ ಮಹಿಳೆ ನೆಲಕ್ಕೆ ಬಿದ್ದು ಇಹಲೊಕ ತ್ಯೆಜಿಸಿದ್ದಾರೆ.
ಅಂದಹಾಗೆ ಈ ಘಟನೆ ನಡೆದಿರೋದು ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿರುವ ಜಂಗಲ್ ಟ್ರಯಲ್ಸ್ ರೆಸಾರ್ಟ್ ನಲ್ಲಿ. ರೆಸಾರ್ಟ್ ನಲ್ಲಿ ಜಿಪ್ ಲೈನ್ ತುಂಡಾಗಿ ಅತ್ತಿಬೆಲೆ ಮೂಲದ ರಂಜನಿ (35) ಎಂಬಾಕೆ ಮೃತಪಟ್ಟಿದ್ದಾರೆ. ಭಾನುವಾರ ರಜಾ ದಿನದ ಹಿನ್ನೆಲೆಯಲ್ಲಿ 18 ಮಂದಿ ಸ್ನೇಹಿತರು ಜಂಗಲ್ ಟ್ರಯಲ್ಸ್ ರೆಸಾರ್ಟ್‌ಗೆ ಬಂದಿದ್ದರು. ಈ ವೇಳೆ ರೆಸಾರ್ಟ್ ನಲ್ಲಿರುವ ಹಲವು ಕ್ರೀಡೆಗಳನ್ನುಆಡಲು ಮುಂದಾಗಿದ್ದಾರೆ. ಬೆಳಿಗ್ಗೆ 11 ಗಂಟೆಗೆ ತಂತಿಯ ಜಿಪ್ ನಲ್ಲಿ ಕೂತಿದ್ದ ರಂಜನಿ ಆಡುವಾಗ ಜಿಪ್ ಲೈನ್ ತುಂಡಾಗಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾಳೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ರೆಸಾರ್ಟ್ ಮ್ಯಾನೇಜರ್ ಪುಟ್ಟಮಾದು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ಜಿಪ್ ಲೈನ್ ಬಗ್ಗೆ ಅನೇಕ ಬಾರಿ ದೂರು ನೀಡಿದರು ರೆಸಾರ್ಟ್ ಮಾಲೀಕ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮ್ಯಾನೇಜರ್ ನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಇನ್ನೂ ಅಂತಹುದೇ ಮತ್ತೊಂದು ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪ್ರವಾಸಿಗರನ್ನು ಕರೆದುಕೊಂಡು ಹೋಗಿದ್ದ ಬೋಟ್ ಪಲ್ಟಿಯಾಗಿ ನಲವತ್ತು ಮಂದಿ ನೀರು ಪಾಲಾಗುತ್ತಿದ್ದವರನ್ನು ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ರಕ್ಷಣಾ ತಂಡ ರಕ್ಷಣೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ ನಡೆದಿದೆ. ಮೂಡಂಗಿಯ ಗಣೇಶ್ ಹಾಗೂ ರಮೇಶ್ ಎಂಬುವವರಿಗೆ ಸೇರಿದ ಪ್ರವಾಸಿ ಬೋಟ್ ನಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುಮತಿಯಿಲ್ಲದೇ 28 ಮಂದಿಯನ್ನು ಕರೆದುಕೊಂಡು ಹೋಗುವ ಬೋಟ್ ನಲ್ಲಿ 40 ಮಂದಿಯನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲ್ಲೆ ದೋಣಿ ಮುಗುಚಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಬೋಟ್ ನಲ್ಲಿದ್ದ ಪ್ರವಾಸಿಗರು ಲೈಫ್ ಜಾಕೆಟ್ ಹಾಕಿದ್ದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.