ಗುಡಿಬಂಡೆ: ಸುಮಾರು 15 ದಿನಗಳಿಂದ ನೀರಿಗೆ ಸಮಸ್ಯೆಯಾಗಿದ್ದರು, ಗ್ರಾ.ಪಂ. ಅಧಿಕಾರಿಗಳು ಗಮನಹರಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ, ಸಮಸ್ಯೆ ಬಗ್ಗೆ ತಾ.ಪಂ. ಇ.ಒ ಗೆ ಕರೆ ಮಾಡಿ ಹೇಳಿದರೇ ಟೈಂ ಪಾಸ್ ಮಾಡೋಕೆ ಪೋನ್ ಮಾಡ್ತೀರಾ ಎಂದು ಉಡಾಫೆ ಉತ್ತರ ಕೊಡುತ್ತಾರೆ ಎಂದು ಆರೋಪಿಸಿ ತಾಲೂಕಿನ ಹಂಪಸಂದ್ರ ಗ್ರಾ.ಪಂ. ವ್ಯಾಪ್ತಿಯ ಕೊಂಡರೆಡ್ಡಿಹಳ್ಳಿ ಗ್ರಾಮಸ್ಥರು ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ತಾಲೂಕಿನಾದ್ಯಂತ ಬರಗಾಲ ಆವರಿಸಿದ್ದು, ನೀರಿಗಾಗಿ ಪರಿತಪಿಸುವಂತಾಗಿದೆ. ಜನ ಜಾನುವಾರುಗಳು ನೀರಿಲ್ಲದೇ ಪರದಾಡುವಂತಾಗಿದೆ. ಕುಡಿಯುವ ನೀರು ಸೇರಿದಂತೆ ದಿನನಿತ್ಯದ ಕೆಲಸ ಕಾರ್ಯಗಳಿಗೂ ಸಹ ನೀರಿಲ್ಲ. ಈ ಕುರಿತು ನಾವು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ್ದೇವೆ. ನಮ್ಮ ಸಮಸ್ಯೆಯನ್ನು ಆಲಿಸಲು ಯಾವುದೇ ಅಧಿಕಾರಿ ಗ್ರಾಮಕ್ಕೆ ಬರಲಿಲ್ಲ. ಗ್ರಾಮದಲ್ಲಿನ ಖಾಸಗಿ ಬೋರ್ ವೆಲ್ ಅಥವಾ ಬಾವಿಗಳ ಬಳಿ ನೀರು ತರೋಣ ಎಂದರೇ ಅಲ್ಲೂ ನೀರಿಲ್ಲ. ಕುಡಿಯಲು ನೀರು ತರಲು ಗುಡಿಬಂಡೆ ಪಟ್ಟಣಕ್ಕೆ ಬರಬೇಕು. ವಾಹನಗಳಿರುವವರು ನೀರು ತಂದುಕೊಳ್ಳುತ್ತಾರೆ. ಯಾವುದೇ ವಾಹನ ಇಲ್ಲದಂತಹವರು ಏನು ಮಾಡಬೇಕು. ಆದ್ದರಿಂದ ಕೂಡಲೇ ನಮ್ಮ ಸಮಸ್ಯೆ ಬಗೆಹರಿಸಬೇಕೆಂದು ಗ್ರಾ.ಪಂ. ಕಚೇರಿ ಮುಂಭಾಗ ಬೀಗ ಜಡಿದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಷ ಹೊರಹಾಕಿದರು.
ಬಳಿಕ ಕೊಂಡರೆಡ್ಡಿಹಳ್ಳಿ ಗ್ರಾ.ಪಂ ಸದಸ್ಯ ನಾಗರಾಜು ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ದಿನಗಳಿಂದ ನೀರಿನ ಸಮಸ್ಯೆಯಿತ್ತು. ಅದನ್ನು ಅರಿತು ನನ್ನ ಕೈಯಾಲಾದಷ್ಟು ದಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದೆ. ಈ ಸಮಸ್ಯೆಯ ಬಗ್ಗೆ ಹಂಪಸಂದ್ರ ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಒ ರವರಿಗೆ ತಿಳಿಸಿದ್ದೆ. ವಿದ್ಯುತ್ ಸಮಸ್ಯೆಯನ್ನು ಹೇಳಿ ನುಣುಚಿಕೊಳ್ಳುವ ಕೆಲಸ ಮಾಡಿದ್ದಾರೆ. ಜೊತೆಗೆ ಹಂಪಸಂದ್ರ ಗ್ರಾ.ಪಂ. ವ್ಯಾಪ್ತಿಯ ಬೋರ್ ವೆಲ್ ಗಳ ನಿರ್ವಹಣೆಯನ್ನು ಬಾಗೇಪಲ್ಲಿಯ ಯಾರಿಗೋ ಗುತ್ತಿಗೆ ನೀಡಿದ್ದಾರೆ. ಅವರಿಗೆ ಮೋಟಾರ್ ಎತ್ತುವಂತಹ ವಾಹನವಿಲ್ಲ. ಅಂತಹವರಿಗೆ ಏತಕ್ಕಾಗಿ ಟೆಂಡರ್ ನೀಡಬೇಕು. ಇಷ್ಟೆಲ್ಲಾ ಸಮಸ್ಯೆಗಳ ಬಗ್ಗೆ ಗುಡಿಬಂಡೆ ತಾ.ಪಂ. ಇ.ಒ ಹೇಮಾವತಿಯವರಿಗೆ ದೂರವಾಣಿ ಮೂಲಕ ಕರೆ ಮಾಡಿದರೇ, ಅವರು ಟೈಂ ಪಾಸ್ ಮಾಡೋಕೆ ಕಾಲ್ ಮಾಡ್ತೀರಾ ಎಂದು ಉಡಾಫೆ ಉತ್ತರ ನೀಡುತ್ತಾರೆ. ಓರ್ವ ಜನಪ್ರತಿನಿಧಿಯಾದ ನನಗೆ ಅವರು ಈ ರೀತಿಯ ಉತ್ತರ ನೀಡಿದರೇ ಇನ್ನೂ ಜನಸಾಮಾನ್ಯರಿಗೆ ಯಾವ ರೀತಿಯಲ್ಲಿ ಉತ್ತರಿಸುತ್ತಾರೆ. ಆದ್ದರಿಂದ ಕೂಡಲೇ ನಮ್ಮ ಸಮಸ್ಯೆ ಬಗೆಹರಿಸದೇ ಇದ್ದರೇ ಗುಡಿಬಂಡೆ ತಾಲೂಕು ಪಂಚಾಯತಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ತಿಳಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಪಿಡಿಒ ನರಸಿಂಹಮೂರ್ತಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು. ಈ ವೇಳೆ ಪಿಡಿಒ ಹಾಗೂ ಗ್ರಾಮಸ್ಥರ ನಡುವೆ ಕೊಂಚ ವಾಗ್ದಾಳಿ ಸಹ ನಡೆಯಿತು. ಮುಂದಿನ 24 ಗಂಟೆಯೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ತಾತ್ಕಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದುಕೊಂಡರು.