ಕರ್ನಾಟಕದ ವಾಲ್ಮೀಕಿ ಅಭಿವೃದ್ದಿ ನಿಗಮದ 187 ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ವತಿಯಿಂದ ರಾಜ್ಯದ ವಿವಿಧ ಕಡೆ ಪ್ರತಿಭಟನೆ ನಡೆಸಿದ್ದು, ಈ ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕೆಂದು ಈ ಸಮಯದಲ್ಲಿ ಆಗ್ರಹಿಸಲಾಗಿದೆ.
ಕೋಲಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಒಂದು ವಿಕೆಟ್ ಬಿದ್ದಿದೆ. ಒಂದು ವಿಕೆಟ್ ಮಾತ್ರವಲ್ಲ ಇನ್ನೂ ಮೂರು ನಾಲ್ಕು ವಿಕೆಟ್ ಗಳು ಬೀಳಲಿವೆ. ವಾಲ್ಮಿಖಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂಪಾಯಿ ಹಣ ಅವ್ಯವಹಾರ ಆಗಿದೆ. ಅದರಲ್ಲಿ ನಾಗೇಂದ್ರ ಪಾಲು 20 ಪರ್ಸೆಂಟ್ ಆದರೆ 80 ಪರ್ಸೆಂಟ್ ಲೂಟಿ ಮಾಡಿರೋದು ಸಿದ್ದರಾಮಯ್ಯ ಅಂಡ್ ಗ್ಯಾಂಗ್, ಅದಕ್ಕೆ ಸಿದ್ದರಾಮಯ್ಯನವರ ರಾಜೀನಾಮೆಗೆ ಪಟ್ಟು ಹಿಡಿದು ವಿಧಾನಸಭೆಯಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ಒಂದು ವಿಕೆಟ್ ಬಿದ್ದಿರೋದಲ್ಲ ಇನ್ನು ಮೂರು ನಾಲ್ಕು ವಿಕೆಟ್ ಬೀಳೋದಿದೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
ಇನ್ನೂ ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದ್ದು, ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಬಹುಕೋಟಿ ಹಗರಣದ ನಿಮಿತ್ತ ಮಾಜಿ ಮಂತ್ರಿ ಬಿ.ನಾಗೇಂದ್ರ ರವರನ್ನು ವಿಚಾರಣೆಗೆ ಕರೆಯುವ ಧೈರ್ಯ ಎಸ್.ಐ.ಟಿ ಮಾಡುತ್ತಿಲ್ಲವೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಭರ್ಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ ಸರಿ. ಆದರೆ, ಪ್ರಕರಣ ಇಲ್ಲಿಗೆ ಮುಗಿದಿಲ್ಲ. ಅಧಿಕಾರಿ ಮೇಲೆ ಆರೋಪ ಹಾಕಿ ತೇಪೆ ಹಾಕಲು ಸಿಎಂ ಹೊರಟಿದ್ದಾರೆ. ಇನ್ನೂ ಸತ್ಯನಾರಾಯಣ ವರ್ಮಾ ಅವರು ಬಹಳ ಗಂಭೀರವಾದ ಆರೋಪ ಮಾಡಿದ್ದಾರೆ. ಆದರೆ ಇವತ್ತಿನವರೆಗೂ ನಾಗೇಂದ್ರರನ್ನು ಕರೆದು ಎಸ್‍ಐಟಿ ವಿಚಾರಣೆ ಮಾಡುವ ಧೈರ್ಯ ತೋರಿಸಿಲ್ಲ. ನಿನ್ನೆ ಕೋರ್ಟ್ ಕೂಡ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ನುಡಿದರು.
ಇನ್ನೂ ರಾಮನಗರ, ಮಂಡ್ಯ, ಚಿತ್ರದುರ್ಗ, ಬಳ್ಳಾರಿ, ಮಂಗಳೂರು ಸೇರಿದಂತೆ ವಿವಿಧ ಕಡೆ ಕಾಂಗ್ರೇಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ ನಡೆಸಿ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯ ಕಾಂಗ್ರೇಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಾಂಗ್ರೇಸ್ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಆಕ್ರೋಷ ಹೊರಹಾಕಿದ್ದಾರೆ.