ರಾಜ್ಯದ ವಾಲ್ಮೀಕಿ ಅಭಿವೃದ್ದಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣಕ್ಕೆ (Valmiki Development Corporation Scam) ಸಂಬಂಧಿಸಿದಂತೆ ತಾನು ಸಚಿವನಾಗಿದ್ದರೇ ತನಿಖೆಗೆ ತೊಂದರೆಯಾಗಲಿದೆ ಆದ್ದರಿಂದ ಪ್ರಕರಣದ ನಿಷ್ಪಕ್ಷಪಾತ ತನಿಖೆಯಾಗಲಿ ಎಂದು ಸಚಿವ ನಾಗೇಂದ್ರ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ (Valmiki Development Corporation Scam) ಸಂಬಂಧಿಸಿದಂತೆ ಸಚಿವ ನಾಗೇಂದ್ರ ರವರ ಮೇಲೆ ಗಂಭೀರ ಆರೋಪವಿರುವ ಕಾರಣದಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯ ಮಾಡಿದ್ದರು. ಇದೀಗ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮತ್ತು ಪಕ್ಷದ ಅಧ್ಯಕ್ಷರು, ವರಿಷ್ಟರಿಗೆ ಮುಜುಗರವಾಗಬಾರದೆಂದು ನನ್ನ ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಈ ಪ್ರಕರಣದಲ್ಲಿ ಎಲ್ಲೂ ನನ್ನ ಹೆಸರು ಉಲ್ಲೇಖ ಮಾಡಿಲ್ಲ. ಬೇರೆಯವರ ಒತ್ತಡದಿಂದ ರಾಜೀನಾಮೆ ಕೊಡುತ್ತಿಲ್ಲ. ನನ್ನ ರಾಜೀನಾಮೆ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೂ ಸಹ ನಾನು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡುತ್ತಿದ್ದೇನೆ. ಸದ್ಯ ಎಸ್.ಐ.ಟಿ ತನಿಖೆ ನಡೆಯುತ್ತಿದೆ. ಎಲ್ಲಾ ಆರೋಪಗಳು ನಿರಾಧಾರವಾಗಿದೆ. ಎಲ್ಲಾ ಆರೋಪಗಳಿಂದ ಮುಕ್ತನಾಗಿ ಬಂದ ಮೇಲೆ ಎಲ್ಲವನ್ನೂ ಮಾತನಾಡುತ್ತೇಣೆ. ರಾಜಕೀಯ ಅಂದ ಕೂಡಲೇ ಊಹಾಪೋಹಗಳು ಸಾಮಾನ್ಯ. ತನಿಖೆಯಲ್ಲಿ ಸತ್ಯಾಂಶ ಬಂದ ಮೇಲೆ ಮತ್ತೆ ಬರುತ್ತೇನೆ. ಆರೋಪ ಮುಕ್ತನಾದ ಬಳಿಕ ಮತ್ತೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದರು. ಇನ್ನೂ ಇದೇ ಸಮಯದಲ್ಲಿ ಪೆನ್ ಡ್ರೈವ್ ಬಗ್ಗೆ ಸಹ ಪ್ರಶ್ನೆ ಎದುರಾಗಿದೆ. ಪೆನ್ ಡ್ರೈವ್ ಅಂದರೇ ಒಂದೇ ಪೆನ್ ಡ್ರೈವ್ ಇರೋದು, ಅದು ಯಾವುದು ಅಂತಾ ರಾಜ್ಯದ ಜನರಿಗೆ ಗೊತ್ತಿದೆ. ನನಗೆ ಬೇರೆ ಪೆನ್ ಡ್ರೈವ್ ಬಗ್ಗೆ ಗೊತ್ತಿಲ್ಲ ಎಂದು ನಾಗೇಂದ್ರ ತಿಳಿಸಿದರು.