ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಬಹುಕೋಟಿ ವಂಚನೆಯ ಪ್ರಕರಣದಿಂದ (Valmiki Corporation scam) ಆತ್ಮಹತ್ಯೆ ಮಾಡಿಕೊಂಡಿದ್ದ ನಿಗಮದ ಅಧಿಕಾರಿ ಚಂದ್ರಶೇಖರನ್ ರವರ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ಪರಿಹಾರ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಪರಿಹಾರ ನೀಡುವುದಾಗಿ ಈ ಕುರಿತು ಅಧಿವೇಶನದಲ್ಲಿ ಅಧಿಕೃತ ಘೋಷಣೆ ಮಾಢುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಕಳೆದ ಶುಕ್ರವಾರ ವಿಧಾನಸೌಧದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಕಚೇರಿ ಅಧೀಕ್ಷಕ ಚಂದ್ರಶೇಖರನ್ ಪತ್ನಿ ತಮ್ಮ ಪತಿಯ ಸಾವಿನ ಕಾರಣದಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಅವರ ಕುಟುಂಬಕ್ಕೆ 25 ಲಕ್ಷ ಕೊಡುತ್ತೇವೆ, ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತು ಅಧಿವೇಶನದಲ್ಲಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನೂ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ. ನಾನು ನಡೆದಿಲ್ಲ ಎಂದು ಹೇಳಿಲ್ಲ, ಭ್ರಷ್ಟಾಚಾರ ಆಗಿದೆ ಅಂತಾನೇ ಹೇಳಿದ್ದೇವೆ. ಈ ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಬೇಖು ಎಂಬುದು ನಮ್ಮ ನಿಲುವಾಗಿದೆ. ಸಾಮಾನ್ಯವಾಗಿ ಹಣಕಾಸು ವಿಚಾರದಲ್ಲಿ ನಿಗಮದ ಎಂ.ಡಿ ಜವಾಬ್ದಾರಿಯಾಗಿರುತ್ತಾರೆ. ಅವರೇ ಮುಖ್ಯಸ್ಥರೂ ಆಗಿರುತ್ತಾರೆ. ಮಿನಿಷ್ಟರ್ ಪಾಲಿಸಿ ಮೇಕರ್ ಅಷ್ಟೇ, ನಾಗೇಂದ್ರ ಮಿನಿಸ್ಟರ್, ದದ್ದಲ್ ನಿಗಮ ಅಧ್ಯಕ್ಷ ಅಷ್ಟೆ. ಹಗರಣದ ಹಿಂದೆ ಅಧಿಕಾರಿಗಳಿದ್ದಾರೆ. ಅಧಿಕಾರಿ ಚಂದ್ರಶೇಖರನ್ ತಮ್ಮ ಹೆಂಡತಿಯ ಅಂತ್ಯಕ್ರಿಯೆಗೆ ಹೋದಾಗ ನೇಣಿಗೆ ಶರಣಾಗಿದ್ದಾನೆ. ಮನೆಯ ಟಿ.ವಿ ಹಿಂಭಾಗದಲ್ಲಿ ನೋಟ್ ಬುಕ್ ಸಿಗುತ್ತದೆ ಅದರಲ್ಲಿ ತನ್ನ ಸಾವಿಗೆ ಕಾರಣ ತಿಳಿಸಿದ್ದಾರೆ. ಈ ನೋಟ್ ನಲ್ಲಿ ಎಂಡಿ ಪದ್ಮನಾಭ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ, ಬ್ಯಾಂಕ್ ಮ್ಯಾನೇಜರ್ ಸುಚಿಸ್ಮಿತಾ ನನ್ನ ಸಾವಿಗೆ ಕಾರಣ ಎಂದು ಬರೆದಿದ್ದಾರೆ.
ಈ ಸಂಬಂಧ ಮೇ.27 ರಂದು ಚಂದ್ರಶೇಖರನ್ ರವರ ಪತ್ನಿ ಕವಿತಾ ದೂರು ಕೊಟ್ಟಿದ್ದಾರೆ. ದೂರಿನ ಆಧಾರದ ಮೇಲೆ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಬಳಿಕ ಬ್ಯಾಂಕ್ ಅಧಿಕಾರಿಗಳ ವಿರುದ್ದ ನಿಗಮದ ಅಧಿಕಾರಿ ರಾಜಶೇಖರ್ ಹೈಗ್ರೌಂಡ್ಸ್ ಠಾಣೆಗೆ 28 ರಂದು ದೂರು ಕೊಟ್ಟಿದ್ದಾರೆ. ಇದಾಗ ಬಳಿಕ ನನಗೆ ಮಾಹಿತಿ ಹೇಳಿದ್ದಾರೆ. ಅದರಂತೆ ನಾವು ಎಸ್.ಐ.ಟಿ ರಚನೆ ಮಾಡಿ, ನಾಲ್ಕು ಐಪಿಎಸ್ ಅಧಿಕಾರಿಗಳನ್ನು ಆ ತಂಡದಲ್ಲಿ ನೇಮಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಹಾಗೂ ಸಿಬಿಐ ತನಿಖೆ ಮಾಡುತ್ತಿದೆ. ಇಡಿ ಸುಮೊಟೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ನಾಗೇಂದ್ರ ಬಂಧನವಾಗಿದ್ದು, ದದ್ದಲ್ ಮನೆ ಮೇಲೆ ಧಾಳಿ ಮಾಡಿ ತನಿಖೆ ನಡೆಸಿದ್ದಾರೆ. SIT 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ನನಗಿರುವ ಮಾಹಿತಿಯಂತೆ 9 ಮಂದಿಯನ್ನು ಜೈಲಿಗೆ ಕಳುಹಿಸಿದ್ದಾರೆ. ತನಿಖೆ ವೇಳೆ 89.69 ಕೋಟಿ ರೂಗಳಲ್ಲಿ 14.33 ಕೋಟಿ ವಾಪಾಸ್ ಬಂದಿದೆ. 217 ಖಾತೆಗಳಲ್ಲಿ 13.74 ಕೋಟಿ ಫ್ರೀಜ್ ಮಾಡಲಾಗಿದೆ. ಸತ್ಯನಾರಾಯಣ ವರ್ಮಾ ಎಂಬಾತ ಆ ಹಣದಲ್ಲಿ ಲ್ಯಾಂಬೋರ್ಗಿನಿ , ಬೆಂಜ್ ಕಾರುಗಳನ್ನ ಖರೀದಿಸಿದ್ದಾರೆ. ರತ್ನಾಕರ ಕೋ ಆಪರೇಟೀವ್ ಬ್ಯಾಂಕ್‌ನಲ್ಲಿದ್ದ 46 ಕೋಟಿ ಫ್ರೀಜ್ ಮಾಡಲಾಗಿದೆ. ಒಟ್ಟು 85.25 ಕೋಟಿ ಫ್ರೀಜ್ ಆಗಿದೆ. ಈ ಪ್ರಕರಣಕ್ಕೂ ಸರ್ಕಾರಕ್ಕೂ ಏನೂ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.