ಸದ್ಯ ರಾಜ್ಯದಲ್ಲಿ ಸಿಎಂ, ಡಿಸಿಎಂ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಇತ್ತೀಚಿಗಷ್ಟೆ ಒಕ್ಕಲಿಗ ಮಠದ ಚಂದ್ರಶೇಖರ್ ಸ್ವಾಮೀಜಿ ಡಿ.ಕೆ.ಶಿವಕುಮಾರ್ ರವರನ್ನು ಮುಖ್ಯಮಂತ್ರಿ ಮಾಡಬೇಕು, ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿದ್ದು, ಈ ಬಗ್ಗೆ ಸಿದ್ದರಾಮಯ್ಯ ಆಪ್ತ ಬಣದ ಶಾಸಕರು, ಸಚಿವರು ಗರಂ ಆಗಿದ್ದಾರೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ತುಂಬಾ ಗರಂ ಆಘಿದ್ದು, ಸ್ವಾಮೀಜಿ ಅವರು ಸ್ಥಾನ ಬಿಟ್ಟು ಕೊಡ್ತಾರಾ? ಅವರು ಬಿಟ್ಟು ಕೊಟ್ರೆ ನಾನೇ ಕಾವಿ ಧರಿಸಿ ಸ್ವಾಮೀಜಿ ಆಗ್ತೀನಿ ಅಂತಾ ಫೈರ್ ಆಗಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಹ ರಿಯಾಕ್ಟ್ ಆಗಿದ್ದು, ಅವರು ಹೇಳಿದ್ದು ಏನು ಗೊತ್ತಾ?
ಒಕ್ಕಲಿಗ ಮಠದ ಚಂದ್ರಶೇಖರ್ ಸ್ವಾಮೀಜಿ ಡಿ.ಕೆ.ಶಿವಕುಮಾರ್ ರವರಿಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಆಗ್ರಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳುವುದು ಹೈಕಮಾಂಡ್ ನಾಯಕರದ್ದು, ಅವರು ಏನು ತೀರ್ಮಾನ ಮಾಡುತ್ತಾರೋ ಹಾಗೆ ಎಂದು ಹೇಳಿದ್ದಾರೆ. ಹೆಚ್ಚುವರಿ ಡಿಸಿಎಂ ಹಾಗೂ ಅಧಿಕಾರ ಬಿಟ್ಟುಕೊಡುವ ಎಲ್ಲಾ ತೀರ್ಮಾನ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸಿಎಂ ಬದಲಾವಣೆ ಹಾಗೂ ಡಿಸಿಎಂ ಸೃಷ್ಟಿ ಬಗ್ಗೆ ಹೈ ಕಮಾಂಡ್ ನತ್ತ ಬೊಟ್ಟು ಮಾಡಿದ್ದಾರೆ.
ಇನ್ನೂ ಕೆಂಪೇಗೌಡ ಜಯಂತಿ ಆಚರಣೆಯ ವೇದಿಕೆಯ ಮೇಲೆ ಚಂದ್ರಶೇಖರ್ ಸ್ವಾಮೀಜಿ ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ಮಾತನಾಡಿದರ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಇರುಸು ಮುರುಸಿಗೆ ಒಳಗಾದ ಸನ್ನಿವೇಶ ಸಹ ನಡೆಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನಾ ಭಾಷಣ ಮುಗಿಸಿ ದೆಹಲಿಗೆ ಹೋರಡುವುದಾಗಿ ಸಿಎಂ ತಿಳಿಸಿದರು. ಈ ಸಮಯದಲ್ಲಿ ಸ್ವಾಮೀಜಿ ತಮ್ಮ ಭಾಷಣ ಕೇಳಿ ಹೋಗುವಂತೆ ಹೇಳಿದ್ದರು. ಒಕ್ಕಲಿಗ ಮಠದ ಚಂದ್ರಶೇಖರ್ ಸ್ವಾಮೀಜಿ ಮಾತನಾಡುತ್ತಾ ಡಿಕೆಶಿಗೆ ಅಧಿಕಾರ ಬಿಟ್ಟುಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಅವರ ಮಾತಿಗೆ ವೇದಿಕೆಯಲ್ಲಿದ್ದ ನಂಜಾವಧೂತ ಸ್ವಾಮೀಜಿ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿ ಧನಿಗೂಡಿಸಿಲ್ಲ. ಬಳಿಕ ನಂಜಾವಧೂತ ಸ್ವಾಮೀಜಿ ಹಾಗೂ ನಿರ್ಮಲಾನಂದ ಶ್ರೀಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚಂದ್ರಶೇಖರ್ ಸ್ವಾಮೀಜಿ ಕಡೆ ತಿರುಗಿ ಸಹ ನೋಡದೇ ಹೋರಟುಬಿಟ್ಟರು.
ಇನ್ನೂ ಕೃಷಿ ಸಚಿವ ಚೆಲುವರಾಯಸ್ವಾಮಿ ಸಹ ಈ ಕುರಿತು ರಿಯಾಕ್ಟ್ ಆಗಿದ್ದಾರೆ. ಚಂದ್ರಶೇಖರ್ ಸ್ವಾಮೀಜಿಗಳು ಹೇಳಿದ್ದು, ಅವರ ವೈಯುಕ್ತಿಕ ಹೇಳಿಕೆಯಾಗಿದೆ. ಆಕಸ್ಮಿಕವಾಗಿ ಅವರು ಈ ಹೇಳಿಕೆ ನೀಡಿದ್ದಾರೆ. ಒಕ್ಕಲಿಗರಿಗೂ ಅವಕಾಶ ಮಾಡಿಕೊಡುವಂತೆ ಜೇಳಿದ್ದಾರೆ ಅಷ್ಟೆ. ಸಿಎಂ ಸ್ಥಾನದ ಕುರಿತು ಹೈಕಮಾಂಡ್ ಸೂಕ್ತ ನಿರ್ಧಾರ ಮಾಡುತ್ತದೆ. ಕಾಂಗ್ರೇಸ್ ಪಕ್ಷದಲ್ಲಿ ಎಲ್ಲರಿಗೂ ಅಧಿಕಾರ ಸಿಗುತ್ತದೆ ಎಂದು ಹೇಳಿದ್ದಾರೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಬದಲಾವಣೆ ವಿಚಾರ ನಮ್ಮ ಪಕ್ಷದ ಆಂತರಿಕ ವಿಚಾರವಾಗಿದೆ. ಒಬ್ಬರು ಮುಖ್ಯಮಂತ್ರಿ ಇರೋವಾಗ ಈ ರೀತಿಯಲ್ಲಿ ಮಾತನಾಡುವುದು ಅಪ್ರಸ್ತುತ. ಶ್ರೀಗಳು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯನವರು ಅನುಭವಿ ಹಾಗೂ ದಕ್ಷ ಆಡಳಿತಗಾರರಿದ್ದಾರೆ. ಹೀಗಿದ್ದಾಗ ಸಿಎಂ ಬದಲಾವಣೆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.