Siddaramaiah – ಹಾಸನದಲ್ಲಿ ನಡೆದ ಕಾಂಗ್ರೇಸ್ ಜನಕಲ್ಯಾಣೋತ್ಸವ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾವುಕರಾಗಿದ್ದಾರೆ. ರಾಜ್ಯದ ಮೂರು ಉಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದೆ ಕಾಂಗ್ರೇಸ್ ಈ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದು, ಈ ಉಪಚುನಾವಣೆಯ ಸಮಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಆಡಿದ್ದಂತಹ ಮಾಡುಗಳಿಗೆ ಕೌಂಟರ್ ಕೊಟ್ಟಿದ್ದಾರೆ. ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ ಭಾವುಕರಾಗಿ ಅಂತಿಮವಾಗಿ ಗೆಲ್ಲೋದು ಮಾತ್ರ ಸತ್ಯ ಎಂದಿದ್ದಾರೆ.
ಜನ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಜನಕಲ್ಯಾಣೋತ್ಸವ ಅಭೂತಪೂರ್ವ ಯಶಸ್ಸು ನನಗೆ ಆನೆಬಲ ನೀಡಿದೆ. ನನ್ನ ಹಾಗೂ ಪಕ್ಷದ ಮೇಲಿನ ಪ್ರೀತಿಯಿಂದ ದೂರದ ಊರುಗಳಿಂದ ಆಗಮಿಸಿ, ಅಪಪ್ರಚಾರ, ದ್ವೇಷರಾಕಾರಣ, ಅನ್ಯಾಯದ ವಿರುದ್ದ ನನ್ನ ದನಿಗೆ ದನಿಗೂಡಿಸಿದ ನನ್ನೆಲ್ಲಾ ಅಭಿಮಾನಿಗಳಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ನಾನು ಚಿರ ಋಣಿಯಾಗಿದ್ದೇನೆ. ಜೊತೆಗೆ ಈ ಸಮಾವೇಶದ ಆಯೋಜನೆಗೆ ಶ್ರಮಿಸಿದ ಶೋಷಿತ ಸಮುದಾಯಗಳು, ಸಂಘಟನೆಗಳು ಹಾಗೂ ಪಕ್ಷದ ನಾಯಕರಿಗೆ ಅನಂತ ಧನ್ಯವಾದಗಳು. ಜನತೆಯ ಸೇವೆಯೇ ಜನಾರ್ಧನನ ಸೇವೆ. ಜನ ಸೇವೆ ಮಾಡಲು ಒದಗಿಬಂದ ಅವಕಾಶ ಅಧಿಕಾರ ಎಂದು ಪ್ರಾಮಾಣಿಕವಾಗಿ ನಂಬಿದವನು ನಾನು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಟ್ವೀಟ್ : Click Here
ಸತ್ಯ, ಧರ್ಮ ಮತ್ತು ನ್ಯಾಯದ ನಡಿಗೆಯಲ್ಲಿ ನನ್ನ ಜೊತೆ ಈ ನಾಡಿನ ಪ್ರಜ್ಞಾವಂತರು, ಶೋಷಿತ ಜನರು ಇದ್ದಾರೆ ಎಂಬುದಕ್ಕೆ ಇಂದು ಸೇರಿದ್ದ ಜನಸಾಗರ ಸಾಕ್ಷಿ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರುವ ವರೆಗೆ ರಾಜಕೀಯ ವಿರೋಧಿಗಳ ಯಾವ ಷಡ್ಯಂತ್ರ, ಬೆದರಿಕೆಗಳಿಗೆ ನಾನು ಜಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ. ಎಲ್ಲವನ್ನೂ ಎದುರಿಸಿ ಗೆಲ್ಲುತ್ತೇನೆ. ನಾನು ಸತ್ಯದ ಪರವಾಗಿದ್ದೇನೆ, ಅಂತಿಮವಾಗಿ ಗೆಲ್ಲುವುದು ಸತ್ಯವೇ ಎಂದು ಸಿಎಂ ಸಿದ್ದರಾಮಯ್ಯ ಭಾವುಕರಾಗಿ ಮಾತನಾಡಿದರು.
ದೇವೇಗೌಡರು ರಾಜಕೀಯವಾಗಿ ಒಕ್ಕಲಿಗ ನಾಯಕರನ್ನು ನಿರಂತರವಾಗಿ ಮುಗಿಸುತ್ತಿದ್ದಾರೆ. ಬಚ್ಚೇಗೌಡರು, ವೈ.ಕೆ.ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ದೇವೇಗೌಡರು ರಾಜಕೀಯವಾಗಿ ಮುಗಿಸಿದರು. ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರು ಆಗಲೇ ಈ ಪಾಪದ ಹೊರೆಯನ್ನು ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಈಗ ಒಕ್ಕಲಿಗ ನಾಯಕ ಕೃಷ್ಣಪ್ಪ ಅವರ ಮಾತು ನಿಜವಾಗಿದೆ. ನಾನು ಮತ್ತು ಜಾಲಪ್ಪ ಒಟ್ಟಾಗಿ ರಾಮಕೃಷ್ಣ ಹೆಗಡೆಯವರ ಬದಲಿಗೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೆವು. ಆಮೇಲೆ ನನ್ನನ್ನೇ ಪಕ್ಷದಿಂದ ಉಚ್ಚಾಟಿಸಿದರು. ಕಾಂಗ್ರೆಸ್ ಸರ್ಕಾರ ಮಾತ್ರ ಸುಭದ್ರ ಸರ್ಕಾರ ಕೊಡಲು ಸಾಧ್ಯ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಇದು ಶತಸಿದ್ಧ. ಹಾಸನದಲ್ಲಿ ಈ ಮಟ್ಟದ ದೊಡ್ಡ ಜನ ಕಲ್ಯಾಣ ಕಾಂಗ್ರೆಸ್ ಸಮಾವೇಶ ಹಿಂದೆಂದೂ ಆಗಿರಲಿಲ್ಲ. ಇದರಲ್ಲಿ ಸ್ವಾಭಿಮಾನಿ ಒಕ್ಕೂಟಗಳು, ಕಾಂಗ್ರೆಸ್ಸೇತರ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷ ಒಟ್ಟಾಗಿ ಶ್ರಮಿಸಿವೆ. ಕಾರ್ಯಕ್ರಮದ ಆಯೋಜಕರೆಲ್ಲರಿಗೂ ಧನ್ಯವಾದಗಳು ಎಂದರು.