Wednesday, July 30, 2025
HomeStateSchool Parliament Election : ಗೌಡೇಟಿ ಶಾಲೆಯಲ್ಲಿ ಪ್ರಜಾಪ್ರಭುತ್ವದ ಪಾಠ: "ಶಾಲಾ ಸಂಸತ್ ಚುನಾವಣೆ" ಹಬ್ಬದ...

School Parliament Election : ಗೌಡೇಟಿ ಶಾಲೆಯಲ್ಲಿ ಪ್ರಜಾಪ್ರಭುತ್ವದ ಪಾಠ: “ಶಾಲಾ ಸಂಸತ್ ಚುನಾವಣೆ” ಹಬ್ಬದ ವಾತಾವರಣ ಸೃಷ್ಟಿ…!

School Parliament Election : ಪಾವಗಡ ತಾಲ್ಲೂಕಿನ ಗೌಡೇಟಿ ಸರ್ಕಾರಿ ಪ್ರೌಢಶಾಲೆ 2025-26ನೇ ಸಾಲಿನ “ಶಾಲಾ ಸಂಸತ್ ಚುನಾವಣೆ”ಯೊಂದಿಗೆ ನಿಜವಾದ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಈ ಚುನಾವಣೆಯು ಸಾಮಾನ್ಯ ಚುನಾವಣೆಗಳಿಗೇನೂ ಕಮ್ಮಿಯಿರಲಿಲ್ಲ! ಅಬ್ಬರದ ಪ್ರಚಾರ, ಪರ-ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆ, ಮತದಾರರನ್ನು ಓಲೈಸುವ ಕಸರತ್ತು, ಮತಗಟ್ಟೆಯ ಮುಂದೆ ಸಾಲುಗಟ್ಟಿ ನಿಂತ ವಿದ್ಯಾರ್ಥಿ ಮತದಾರರು – ಎಲ್ಲವೂ ಒಂದು ಅದ್ಭುತ ಅನುಭವವನ್ನು ನೀಡಿದವು. ಮಕ್ಕಳು ತಮ್ಮ ಹಕ್ಕು ಚಲಾಯಿಸಲು ತೋರಿದ ಅತೀವ ಉತ್ಸಾಹ, ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಕಂಡುಬಂದ ಗೆಲುವಿನ ಹುಮ್ಮಸ್ಸು, ಇವೆಲ್ಲವೂ ಸಾಮಾನ್ಯ ಚುನಾವಣೆಗಳನ್ನೂ ನಾಚಿಸುವಂತಿತ್ತು.

Goudeti Government High School Student Parliament Election 2025

School Parliament Election – ಮತದಾನದ ಮಹತ್ವ ಸಾರಿದ SVEEP ಸಮಿತಿ ಮತ್ತು ELC!

ಶಾಲಾ SVEEP ಸಮಿತಿ ಮತ್ತು ಗೌಡೇಟಿ ಸರ್ಕಾರಿ ಪ್ರೌಢಶಾಲೆಯ ಮತದಾರರ ಸಾಕ್ಷರತಾ ಕ್ಲಬ್ (E.L.C) ತಂಡವು “ಚುನಾವಣಾ ಗೀತೆ”ಯನ್ನು ಹಾಡುವ ಮೂಲಕ ರಹಸ್ಯ ಮತದಾನ ಮತ್ತು ಕಡ್ಡಾಯ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದ್ದು ವಿಶೇಷ ಗಮನ ಸೆಳೆಯಿತು. ಈ ಹಾಡಿನೊಂದಿಗೆ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಚುನಾವಣಾಧಿಕಾರಿಗಳು, ಅಭ್ಯರ್ಥಿಗಳು, ಮತದಾರರು, ಶಾಲಾ ಸಿಬ್ಬಂದಿ ಎಲ್ಲರೂ ಸೇರಿ ಪ್ರಧಾನಮಂತ್ರಿ ಮತ್ತು ಅವರ ಮಂತ್ರಿಮಂಡಲದ ಸಹೋದ್ಯೋಗಿಗಳ ಆಯ್ಕೆಯ ಮೂಲಕ ಶಾಲಾ ಸಂಸತ್ ರಚನೆಗೆ ಮುಂದಾದರು. ಮತದಾರರು ತಮ್ಮ ಆಯ್ಕೆಯ ಗುಟ್ಟನ್ನು ಕಾಪಾಡಿಕೊಂಡು ಮತದಾನದ ಗೌಪ್ಯತೆಯನ್ನು ಎತ್ತಿಹಿಡಿದರು.

School Parliament Election – ಮಕ್ಕಳಿಗಾಗಿ ಮಕ್ಕಳಿಂದಲೇ ಚುನಾವಣೆ

ಭಾರತದ ಚುನಾವಣಾ ಪ್ರಕ್ರಿಯೆಗಳು, ರಹಸ್ಯ ಮತದಾನ ಮತ್ತು ಕಡ್ಡಾಯ ಮತದಾನದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಲು, ಹಾಗೆಯೇ ಹಣ ಮತ್ತಿತರ ಆಮಿಷಗಳಿಂದ ದೂರವಿರುವಂತೆ ಪ್ರೇರೇಪಿಸುವ ದೃಷ್ಟಿಯಿಂದ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳನ್ನು ಮಕ್ಕಳಿಂದಲೇ ನಡೆಸಲಾಯಿತು. ಇದು ಮಕ್ಕಳಿಗೆ ಚುನಾವಣೆಯ ನೈಜ ಅನುಭವವನ್ನು ನೀಡಿತು. ಚುನಾವಣಾ ಅಧಿಸೂಚನೆ ಹೊರಡಿಸುವುದರಿಂದ ಹಿಡಿದು ನಾಮಪತ್ರಗಳ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವಿಕೆ, ಪ್ರಚಾರ, ಮತದಾನ, ಮತಗಳ ಎಣಿಕೆ, ಫಲಿತಾಂಶ ಪ್ರಕಟಣೆ, ಖಾತೆಗಳ ಹಂಚಿಕೆ, ಮತ್ತು ಪ್ರಮಾಣ ವಚನ ಸ್ವೀಕಾರದಂತಹ ಪ್ರಕ್ರಿಯೆಗಳನ್ನು ನಡೆಸುವ ಮೂಲಕ ಮಾದರಿ ಸಂಸತ್ ರಚಿಸಲಾಯಿತು.

School Parliament Election – ನಿಜವಾದ ಚುನಾವಣಾ ಸಿಬ್ಬಂದಿಯಂತೆ ಕಾರ್ಯನಿರ್ವಹಿಸಿದ ವಿದ್ಯಾರ್ಥಿಗಳು

ಮಕ್ಕಳೇ ಚುನಾವಣಾ ಸಿಬ್ಬಂದಿಯಾಗಿ ಮತಗಟ್ಟೆಯ ಎಲ್ಲಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ರಹಸ್ಯ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಚಿಹ್ನೆಗಳಿದ್ದ ಮತಪತ್ರಗಳನ್ನು ತಯಾರಿಸಲಾಗಿತ್ತು. ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಗುರುತಿನ ಚೀಟಿಗಳನ್ನು ಬಳಸಿ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ರಹಸ್ಯವಾಗಿ ಮತ ಚಲಾಯಿಸುವ ಮೂಲಕ ಚುನಾವಣೆಯ ನೈಜ ಅನುಭವ ಪಡೆದುಕೊಂಡರು.

Goudeti Government High School Student Parliament Election 2025

School Parliament Election – ಫಲಿತಾಂಶ: ಶಾಲಾ ಸಂಸತ್ ಸಿದ್ಧ!

ಅತ್ಯಂತ ಕುತೂಹಲದಿಂದ ಕೂಡಿದ್ದ ಮತ ಎಣಿಕೆಯ ಸಂದರ್ಭವು ಅಭ್ಯರ್ಥಿಗಳ ಎದೆಬಡಿತವನ್ನು ಹೆಚ್ಚಿಸಿತ್ತು. ಫಲಿತಾಂಶ ಹೊರಬೀಳುತ್ತಿದ್ದಂತೆ ವಿಜೇತ ಅಭ್ಯರ್ಥಿಗಳ ಮುಖದಲ್ಲಿ ಮಂದಹಾಸ ಕಂಡುಬಂತು. ಅಂತಿಮವಾಗಿ ಚುನಾವಣಾ ಫಲಿತಾಂಶ ಪ್ರಕಟಗೊಂಡು ಶಾಲಾ ಸಂಸತ್ತಿನ ಪ್ರಮುಖ ಸ್ಥಾನಗಳಿಗೆ ಆಯ್ಕೆಯಾದವರು ಇವರು:

  • ಪ್ರಧಾನಮಂತ್ರಿ: 10ನೇ ತರಗತಿಯ ವರ್ಷಿತಾ ಕೆ.ಎ
  • ಹಣಕಾಸು ಮತ್ತು ಪ್ರವಾಸ ಸಚಿವ: 10ನೇ ತರಗತಿಯ ನಾನಿ ಟಿ.
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು: 10ನೇ ತರಗತಿಯ ಸ್ಪಂದನಾ ಮತ್ತು 9ನೇ ತರಗತಿಯ ಪ್ರಿಯದರ್ಶಿನಿ
  • ಆಹಾರ, ಆರೋಗ್ಯ ಮತ್ತು ನೈರ್ಮಲ್ಯ ಸಚಿವರು: 9ನೇ ತರಗತಿಯ ತೇಜ್ ಕುಮಾರ್ ಮತ್ತು 8ನೇ ತರಗತಿಯ ಅಂಕಿತ
  • ಕ್ರೀಡಾ ಸಚಿವೆ: 10ನೇ ತರಗತಿಯ ಮೌನಿಕ
  • ಸಾಂಸ್ಕೃತಿಕ ಮತ್ತು ಕಲಾ ಸಚಿವರು: 8ನೇ ತರಗತಿಯ ಸ್ಪಂದನಾ ಮತ್ತು ಕಾವ್ಯ
  • ಪರಿಸರ ಮತ್ತು ನೀರು ಪೂರೈಕೆ ಸಚಿವ: 9ನೇ ತರಗತಿಯ ಚಂದ್ರಶೇಖರ್
School Parliament Election – ಶಾಲಾ ಸಂಸತ್‌ನ ಉದ್ದೇಶ

ಪ್ರಭಾರ ಮುಖ್ಯ ಶಿಕ್ಷಕರಾದ ಲವ ಹೆಚ್. ರವರು ಮಾತನಾಡಿ, ಮಕ್ಕಳಲ್ಲಿ ಪ್ರಜಾಪ್ರಭುತ್ವದಲ್ಲಿನ ಹಕ್ಕು-ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು, ಕಡ್ಡಾಯ ಮತ್ತು ರಹಸ್ಯ ಮತದಾನಗಳ ಬಗ್ಗೆ ಜಾಗೃತಿ ಮೂಡಿಸುವುದು, ಮತದಾನದಿಂದ ಯಾರೂ ವಂಚಿತರಾಗದಂತೆ, ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಬಗ್ಗೆ ಪ್ರಚಾರ ಮಾಡುವುದು, ಬಾಲ್ಯದಿಂದಲೇ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸುವುದು, ತಮ್ಮ ಹಕ್ಕುಗಳ ಬಗ್ಗೆ ಅರಿತು ಧ್ವನಿ ಎತ್ತುವುದು, ಶಾಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು ಸೇರಿದಂತೆ ಉತ್ತಮ ಪ್ರತಿನಿಧಿಗಳ ಆಯ್ಕೆಯ ಮೂಲಕ ಸದೃಢ ರಾಷ್ಟ್ರ ಕಟ್ಟಬೇಕೆಂಬ ಉದ್ದೇಶದಿಂದ ಇಂತಹ ಮಾದರಿ ಸಂಸತ್ ರಚನೆ ಅಗತ್ಯ ಮತ್ತು ಸಹಕಾರಿ ಎಂದು ಅಭಿಪ್ರಾಯಪಟ್ಟರು.

ELC ಸಂಚಾಲಕ ಮತ್ತು ಸಮಾಜ ವಿಜ್ಞಾನ ಶಿಕ್ಷಕರಾದ ನರಸಿಂಹ ರೆಡ್ಡಿ ಎಂ. ರವರು, ಮಕ್ಕಳ ಸಂಸತ್ ರಚನೆಯ ಈ ಚಟುವಟಿಕೆಯು ಭವಿಷ್ಯ ಭಾರತದ ಭಾವಿ ಪ್ರಜ್ಞಾವಂತ ಪ್ರಜೆಗಳನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ. ಇತ್ತೀಚಿನ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಳವಾಗುವ ನಿಟ್ಟಿನಲ್ಲಿ ಮತದಾರರ ಸಾಕ್ಷರತಾ ಕ್ಲಬ್‌ಗಳು (E.L.C) ಪರಿಣಾಮಕಾರಿ ಪಾತ್ರ ವಹಿಸಿವೆ ಎಂದರು.

Goudeti Government High School Student Parliament Election 2025

ಬಿಎಲ್‌ಒ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಶಾಲೆಯ ಶಿಕ್ಷಕರಾದ ಮಹಾಂತಪ್ಪ ಪೂಜಾರಿ ರವರು, ಮತದಾರರ ಪಟ್ಟಿಗೆ ಹೊಸ ಮತದಾರರ ಸೇರ್ಪಡೆ, ಮತದಾರರ ಮಾಹಿತಿಯ ತಿದ್ದುಪಡಿ, ಮತದಾನದ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವಲ್ಲಿ ಶಾಲಾ ಮತದಾರರ ಸಾಕ್ಷರತಾ ಕ್ಲಬ್‌ಗಳು (E.L.C) ತಮ್ಮ ಮಹತ್ವದ ಪಾತ್ರವನ್ನು ವಹಿಸುತ್ತಿವೆ ಎಂದು ಹೇಳಿದರು.

Read this also : NHPC ಯಲ್ಲಿ ಅಪ್ರೆಂಟಿಸ್ ಅವಕಾಶ: ಇಂಜಿನಿಯರ್ ಮತ್ತು ITI ಪದವೀಧರರಿಗೆ ಬಂಪರ್ ಚಾನ್ಸ್!

ಶಾಲಾ ಸಂಸತ್ ಚುನಾವಣಾ ಕಾರ್ಯದಲ್ಲಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಲವ ಹೆಚ್, ಶಿಕ್ಷಕರಾದ ನರಸಿಂಹ ರೆಡ್ಡಿ ಎಂ, ಮಹಾಂತಪ್ಪ ಪೂಜಾರಿ, ಅತಿಥಿ ಶಿಕ್ಷಕರಾದ ರಾಜೇಶ್ ಆರ್, ಮಾಧವ್, ಶಾಲಾ ಸಿಬ್ಬಂದಿ ಅರ್ಷಿಯಾ ಹಾಗೂ ಅಡುಗೆ ಸಿಬ್ಬಂದಿಯವರಾದ ಜ್ಯೋತಿ, ಸುಜಾತಮ್ಮ ಭಾಗವಹಿಸಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular