School – ವಿದ್ಯಾರ್ಥಿ ಜೀವನ ಎಂಬುದು ಅತ್ಯಂತ ಪ್ರಮುಖವಾದುದು, ತಾವು ಬಾಲ್ಯದಿಂದಲೇ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು, ಇದಕ್ಕೆ ಶಿಕ್ಷಣ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರು ಉತ್ತಮ ವಿದ್ಯಾಭ್ಯಾಸ ಪಡೆದುಕೊಂಡು ಮುಂದೆ ಸಾಗಬೇಕೆಂದು ತಾಪಂ ಇಒ ನಾಗಮಣಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಬಡತನದಲ್ಲೇ ಹುಟ್ಟಿ ಬೆಳೆದ ಅಬ್ದುಲ್ ಕಲಾಂ, ಅಂಬೇಡ್ಕರ್, ಸರ್‌ಎಂ.ವಿಶ್ವೇಶ್ವರಯ್ಯ ಮತ್ತಿತರರ ಮಹನೀಯರು ಪರಿಶ್ರಮ ಪಟ್ಟು ಓದಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಅಂತಹ ಸಾಧನೆ ಮಾಡುವ ಶಕ್ತಿ ನಿಮ್ಮಲ್ಲಿದೆ. ಅದಕ್ಕೆ ಸಕಾರಾತ್ಮಕ ಚಿಂತನೆಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ಜೀವನದಲ್ಲಿ ಗುರಿ ತಲುಪಬೇಕಾದರೆ ವಿದ್ಯಾವಂತರಾಗಬೇಕು. ವಿದ್ಯಾವಂತರಾಗಲು ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ವಿದ್ಯೆಗೆ ಬಡತನ, ಶ್ರೀಮಂತನೆಂಬ ತಾರತಮ್ಯವಿಲ್ಲ. ವಿದ್ಯಾರ್ಥಿಗಳು ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಶಿಕ್ಷಕರು ಹಾಗೂ ಪೋಷಕರ ಜವಾಬ್ದಾರಿ ಎಂದು ತಿಳಿಸಿದರು.
ಬಳಿಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ದಿನಗಳಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಜ್ರ ಮಹೋತ್ಸವ ಆಚರಣೆಯತ್ತ ಮುನ್ನಡೆಯುತ್ತಿದ್ದು, 75 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಓಧಿದ ಸಾವಿರಾರು ವಿದ್ಯಾರ್ಥಿಗಳು ಇಂದು ವಿವಿಧ ಸರಕಾರಿ ಇಲಾಖೆಗಳಲ್ಲಿ, ಖಾಸಗಿ ಉದ್ಯೋಗಿಗಳಾಗಿ, ರಾಜಕೀಯ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು ಈ ಗ್ರಾಮದ ನಿವಾಸಿಗಳು ಹೆಮ್ಮೆ ಪಡುವಂತಹದ್ದು. ಗ್ರಾಮಸ್ಥರ ಸಂಪೂರ್ಣ ಸಹಕಾರ, ಶಿಕ್ಷಕರ ತಂಡ ರೂಪಿಸಿದ ಯೋಜನೆಗಳು, ಬಿಸಿಲು ತಾಕದಂತೆ ಶಾಲಾ ಆವರಣದಲ್ಲಿ ಬೆಳೆಸಿರುವ ಗಿಡ, ಮರಗಳ ನೆರಳಲ್ಲಿ ವಿದ್ಯಾರ್ಥಿ ಜೀವನ ಕಳೆಯುತ್ತಿರುವುದು ಪೋಷಕರು ಹಾಗೂ ವಿದ್ಯಾರ್ಥಿಗಳಾದ ನೀವೆಲ್ಲ ಅದೃಷ್ಠವಂತರು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಹಲವು ಪೋಷಕರು ಸಹ ವಿದ್ಯಾರ್ಥಿಗಳ ಜೊತೆ ನೃತ್ಯಗಳನ್ನು ಮಾಡುವ ಮೂಲಕ ವಜ್ರ ಮಹೋತ್ಸವಕ್ಕೆ ಮತ್ತಷ್ಟು ಮೆರಗು ತಂದರು. ಕಾರ್ಯಕ್ರಮದಲ್ಲಿ ಪೋಷಕರಿಗೆ ವಿವಿಧ ರೀತಿಯ ಸಾಂಸ್ಕೃತಿಕ ಕ್ರೀಡೆಗಳನ್ನು ಆಯೋಜಿಸಿದ್ದು ವಿಶೇಷವಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಶಾಲೆಯ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜಯಶಾಲಿಯಾದ ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಪತ್ರ ಗಳನ್ನು ನೀಡಿ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮುನಿಕೃಷ್ಣಪ್ಪ, ಕಾರ್ಯಧ್ಯಕ್ಷ ಕೃಷ್ಣಪ್ಪ, ದಪ್ಪರ್ತಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಾಂಜಿ, ಗ್ರಾಮ ಪಂಚಾಯತಿ ಸಿಬ್ಬಂದಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಶ್ರೀರಾಮರೆಡ್ಡಿ, ನೌಕರರ ಸಂಘದ ಕಾರ್ಯದರ್ಶಿ ರಾಜಶೇಖರ್, ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ನಂಜುಂಡ, ಶಾಲೆಯ ಮುಖ್ಯಶಿಕ್ಷಕರಾದ ವೈ.ನರಸಿಂಹಪ್ಪ, ಸಹ ಶಿಕ್ಷಕರಾದ ಹರಿಕೃಷ್ಣ, ಲಕ್ಷ್ಮೀ ನಾರಾಯಣ ಹಾಗೂ ಶಾಲೆಯ ಸಿಬ್ಬಂದಿ, ಶಾಲೆಯ ಹಳೇ ವಿದ್ಯಾರ್ಥಿಗಳು ಸೇರಿದಂತೆ ಹಲವರು ಹಾಜರಿದ್ದರು.