Awareness : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ಒಂದು ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 20 ಉತ್ಸಾಹಿ ವಿದ್ಯಾರ್ಥಿಗಳು 90 ದಿನಗಳ ಕಾಲ ರೈತರೊಂದಿಗೆ ಬೆರೆತು, ಗ್ರಾಮೀಣ ಕೃಷಿ ಕಾರ್ಯಾನುಭವ (RAWE) ಕಾರ್ಯಕ್ರಮವನ್ನು ಶುರು ಮಾಡಿದ್ದಾರೆ. ಇದು ಬರೀ ಪಾಠ-ಪ್ರವಚನಗಳ ಕಾರ್ಯಕ್ರಮವಲ್ಲ, ಬದಲಿಗೆ ನಮ್ಮ ರೈತರಿಗೆ ಆಧುನಿಕ ಕೃಷಿ ಪದ್ಧತಿಗಳು ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸುವ ಒಂದು ಸೇತುವೆಯಾಗಿದೆ.
Awareness – ರೈತರ ಜೊತೆ ವಿದ್ಯಾರ್ಥಿಗಳ ಕಲಿಕೆ ಮತ್ತು ಹಂಚಿಕೆ!
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇವಲ ಕಲಿಯುವುದಲ್ಲ, ರೈತರೊಂದಿಗೆ ನೇರವಾಗಿ ಹೊಲ-ಗದ್ದೆಗಳಲ್ಲಿ ದುಡಿಯಲಿದ್ದಾರೆ. ಇದರಿಂದ ಅವರಿಗೆ ಕೃಷಿ ಕ್ಷೇತ್ರದ ನೈಜ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಅರಿವಾಗುತ್ತದೆ. ಅದೇ ರೀತಿ, ರೈತರಿಗೆ ಮಣ್ಣು ಪರೀಕ್ಷೆ ಏಕೆ ಮುಖ್ಯ, ಅದರ ಫಲಿತಾಂಶ ಆಧರಿಸಿ ಯಾವ ಬೆಳೆ ಬೆಳೆಯಬೇಕು, ಯಾವ ಗೊಬ್ಬರ ಹಾಕಬೇಕು, ಸಾವಯವ ಕೃಷಿ ಮಾಡುವುದು ಹೇಗೆ, ರಾಸಾಯನಿಕಗಳ ಬಳಕೆ ಕಡಿಮೆ ಮಾಡುವುದು ಹೇಗೆ, ಮತ್ತು ಹೊಸ ತಂತ್ರಜ್ಞಾನ ಆಧಾರಿತ ಕೃಷಿ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಲಿದ್ದಾರೆ.
ಇಷ್ಟೇ ಅಲ್ಲದೆ, ಉತ್ತಮ ಬೆಳೆ ನಿರ್ವಹಣೆ, ಕೀಟ ಮತ್ತು ರೋಗ ನಿಯಂತ್ರಣ, ಹಾಗೂ ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಎಲ್ಲಿ ಸಿಗುತ್ತದೆ ಎಂಬುದರ ಬಗ್ಗೆಯೂ ರೈತರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಇದರಿಂದ ನಮ್ಮ ಅನ್ನದಾತರು ಹೆಚ್ಚು ಇಳುವರಿ ಪಡೆದು, ಉತ್ತಮ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಇದು ರೈತರ ಆದಾಯ ವೃದ್ಧಿಗೆ ಸಹಕಾರಿಯಾಗಲಿದೆ.
Awareness – ರೈತರಿಗೆ ನಿಜಕ್ಕೂ ಅನುಕೂಲ
ಈ ಕಾರ್ಯಕ್ರಮದ ಬಗ್ಗೆ ದಪ್ಪರ್ತಿ ಗ್ರಾಮದ ಹಿರಿಯ ಮತ್ತು ಪ್ರಗತಿಪರ ರೈತರಾದ ವೆಂಕಟಪ್ಪನವರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. “ಈ ವಿದ್ಯಾರ್ಥಿಗಳಿಂದ ನಮಗೆ ಸರ್ಕಾರದ ಹೊಸ ಯೋಜನೆಗಳು, ಉತ್ತಮ ಕೃಷಿ ಉಪಕರಣಗಳು, ಮತ್ತು ಜೈವಿಕ ಕೃಷಿ ವಿಧಾನಗಳ ಬಗ್ಗೆ ಒಳ್ಳೆಯ ಮಾಹಿತಿ ಸಿಕ್ಕಿದೆ. ಇಂತಹ ಕಾರ್ಯಕ್ರಮಗಳು ಸಣ್ಣ ರೈತರಿಗೆ ನಿಜಕ್ಕೂ ತುಂಬಾನೇ ಅನುಕೂಲಕರವಾಗಿದೆ” ಎಂದು ಅವರು ಹೇಳಿದರು.
ಗ್ರಾಮದ ಮುಖಂಡರಾದ ಮುರಳಿ, ನಂಜುಂಡಪ್ಪ, ಮತ್ತು ಕೃಷ್ಣಾರೆಡ್ಡಿ ಅವರೂ ಸಹ RAWE ಕಾರ್ಯಕ್ರಮವನ್ನು ಶ್ಲಾಘಿಸಿದರು. “ವಿದ್ಯಾರ್ಥಿಗಳು ಗ್ರಾಮೀಣ ಭಾಗದ ರೈತರಿಗೆ ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ನಿಜಕ್ಕೂ ಮೆಚ್ಚುವಂತಹ ಕೆಲಸ. ಅವರು ಕೇವಲ ತರಬೇತಿ ನೀಡುವುದಲ್ಲದೆ, ಹೊಸ ತಂತ್ರಜ್ಞಾನಗಳ ಬಗ್ಗೆಯೂ ಮಾಹಿತಿ ನೀಡುತ್ತಿದ್ದಾರೆ” ಎಂದು ಅವರು ಹೇಳಿದರು.
Read this also : Tech Tips : ನಿಮ್ಮ ಫೋನ್ ಕವರ್‌ನಲ್ಲಿ ಕಾರ್ಡ್, ನೋಟು ಇಡುತ್ತೀರಾ? ಹಾಗಿದ್ದರೆ ದೊಡ್ಡ ಅಪಾಯ ಕಾದಿದೆ, ಎಚ್ಚರ..!
Awareness – ಕಾರ್ಯಕ್ರಮದಲ್ಲಿ ಹಾಜರಿದ್ದವರು
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಧನವಂತ್ ಗೌಡ, ಅಮೃತ ವರ್ಷಿಣಿ, ಅಶ್ವಿನಿ, ಭೂಮಿಕಾ, ಚಿನ್ಮಯಿ, ದಿಶಾ ಪ್ರಸನ್ನ, ಗಿರಿಜಾ, ಜ್ಯೋತಿ, ತೇಜಸ್ವಿನಿ, ಅಭಿಷೇಕ್, ದೀಪಕ್, ಗಣೇಶ್, ಹೇಮಂತ್, ಜಯಂತ್, ಕೌಶಿಕ್, ಅಂಬಿಕಾ, ದೀಪ್ತಿ, ಚಂದನಾ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು. ಇವರ ಜೊತೆಗೆ ಗ್ರಾಮದ ಪ್ರಮುಖರು, ಕೃಷಿ ಅಧಿಕಾರಿಗಳು, ಮತ್ತು ಅನೇಕ ರೈತರು ಉಪಸ್ಥಿತರಿದ್ದರು.