ರಾಯಚೂರು (Raichur) ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದ ಈ ವಿಚಿತ್ರ ಘಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪತಿ ತಾತಪ್ಪನನ್ನು ತಳ್ಳಿದ ಆರೋಪದಿಂದ ಸುದ್ದಿಯಾಗಿದ್ದ ಘಟನೆ ಇದೀಗ ಸಂಪೂರ್ಣ ಹೊಸ ಆಯಾಮ ಪಡೆದುಕೊಂಡಿದೆ. ಇಡೀ ಪ್ರಕರಣವೇ ಉಲ್ಟಾ ಆಗಿದ್ದು, ಬದುಕುಳಿದು ಬಂದ ತಾತಪ್ಪನ ಮೇಲೆಯೇ ಈಗ ಕೇಸ್ ದಾಖಲಾಗಿದೆ! “ನನ್ನ ಹೆಂಡತಿ ನನ್ನನ್ನು ತಳ್ಳಿದಳು!” ಎಂದು ಆರೋಪಿಸಿದ್ದ ತಾತಪ್ಪ, ಈಗ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟಕ್ಕೂ ಏನಿದು ಹೊಸ ತಿರುವು? ಬನ್ನಿ, ವಿವರವಾಗಿ ತಿಳಿಯೋಣ.
Raichur – ಸೇತುವೆ ಮೇಲಿನಿಂದ ನದಿಗೆ ತಳ್ಳಿದ ಆರೋಪ – ಅಷ್ಟಕ್ಕೂ ಆಗಿದ್ದೇನು?
ಕೃಷ್ಣಾ ನದಿಯ ಸೇತುವೆ ಮೇಲೆ ಫೋಟೋ ತೆಗೆಸಿಕೊಳ್ಳುವಾಗ ಪತ್ನಿಯನ್ನು ತಳ್ಳಿದ ಘಟನೆ ರಾಜ್ಯಾದ್ಯಂತ ದೊಡ್ಡ ಸುದ್ದಿ ಮಾಡಿತ್ತು. ಪತ್ನಿಯೇ ತನ್ನ ಗಂಡ ತಾತಪ್ಪನನ್ನು ನದಿಗೆ ತಳ್ಳಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈಜಿ ದಡ ಸೇರಿ ಪೊದೆಗಳಲ್ಲಿ ಆಶ್ರಯ ಪಡೆದಿದ್ದ ತಾತಪ್ಪನನ್ನು ಸ್ಥಳೀಯರು ರಕ್ಷಿಸಿದ್ದರು. ಆ ಘಟನೆಯ ನಂತರ, ತಾತಪ್ಪ ತಮ್ಮ ಪತ್ನಿ ವಿರುದ್ಧವೇ ಆರೋಪ ಮಾಡಿದ್ದಲ್ಲದೆ, ವಿಚ್ಛೇದನಕ್ಕೂ ಮುಂದಾಗಿದ್ದರು. ಆದರೆ, ಈ ಪ್ರಕರಣ ಈಗ ಅನಿರೀಕ್ಷಿತ ತಿರುವು ಪಡೆದಿದೆ.
Raichur – ಸಂಪೂರ್ಣ ಕೇಸ್ ಉಲ್ಟಾ: ತಾತಪ್ಪನ ಮೇಲೆಯೇ ಪ್ರಕರಣ ದಾಖಲು!
ರಾಯಚೂರಿನ ಗುರ್ಜಾಪುರ ಬ್ಯಾರೇಜ್ ಬಳಿ ನಡೆದ ಈ ಘಟನೆ ರಾಜ್ಯ ಹಾಗೂ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. “ನನ್ನ ಹೆಂಡತಿ ನನ್ನೊಂದಿಗೆ ಸಂಸಾರ ನಡೆಸಲು ಇಷ್ಟವಿರಲಿಲ್ಲ,” ಎಂದು ತಾತಪ್ಪ ಆರೋಪಿಸಿದ್ದರು. ಅಲ್ಲದೆ, ಕುಟುಂಬಸ್ಥರು ಕೂಡ ಹಲವು ಬಾರಿ ಸಂಧಾನ ಮಾತುಕತೆ ನಡೆಸಿದ್ದರು ಎಂದೂ ಹೇಳಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ, “ಪತ್ನಿ ಉದ್ದೇಶಪೂರ್ವಕವಾಗಿ ನನ್ನನ್ನು ನದಿಗೆ ತಳ್ಳಿದ್ದಾಳೆ” ಎಂದು ತಾತಪ್ಪ ಆರೋಪಿಸಿದ್ದರು. ಆದರೆ, ದಿನದಿಂದ ದಿನಕ್ಕೆ ಪ್ರಕರಣ ಹೊಸ ರೂಪ ಪಡೆಯುತ್ತಿದ್ದಂತೆ, ಇಡೀ ಕೇಸ್ ತಲೆಕೆಳಗಾಗಿದೆ.
Raichur – ಬಾಲ್ಯ ವಿವಾಹ ಕಾಯ್ದೆ ಅಡಿ ತಾತಪ್ಪ ಬಂಧನ ಸಾಧ್ಯತೆ!
ತಾತಪ್ಪ ಗಂಭೀರ ಆರೋಪ ಮಾಡಿದ ಅವರ ಪತ್ನಿ, ವಾಸ್ತವವಾಗಿ ಅಪ್ರಾಪ್ತೆ ಎಂದು ಬಯಲಾಗಿದೆ! ತನಿಖೆಯ ವೇಳೆ, ಆಕೆ ಕೇವಲ 15 ವರ್ಷ 8 ತಿಂಗಳ ಬಾಲಕಿ ಎಂದು ದೃಢಪಟ್ಟಿದೆ. ಇದರ ಬೆನ್ನಲ್ಲೇ, ತಾತಪ್ಪ ಅಪ್ರಾಪ್ತೆಯೊಂದಿಗೆ ಬಾಲ್ಯ ವಿವಾಹವಾಗಿದ್ದಾರೆ ಎಂಬ ಆರೋಪ ಸಾಬೀತಾಗಿದೆ. ಹೀಗಾಗಿ, ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
- A1 ಆರೋಪಿ: ಅಪ್ರಾಪ್ತೆಯ ಪತಿ ತಾತಪ್ಪ
- A2 ಆರೋಪಿ: ತಾತಪ್ಪನ ತಾಯಿ ಗದ್ದೆಮ್ಮ
- A3 ಆರೋಪಿ: ಅಪ್ರಾಪ್ತ ಬಾಲಕಿಯ ತಾಯಿ
ಈ ಮೂವರ ವಿರುದ್ಧವೂ ದೂರು ದಾಖಲಾಗಿದೆ. ದೇವಸೂಗೂರು ಪಿಡಿಒ ರವಿಕುಮಾರ್ ಅವರು ದೂರು ದಾಖಲಿಸಿದ್ದಾರೆ. ಸದ್ಯ ತನಿಖೆ ತೀವ್ರಗೊಂಡಿದ್ದು, ತಾತಪ್ಪನ ಬಂಧನದ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
Read this aslo : Raichur : ರಾಯಚೂರು ನದಿಯಲ್ಲಿ ಭಯಾನಕ ಘಟನೆ: ಫೋಟೋ ನೆಪದಲ್ಲಿ ಪತಿಯನ್ನು ತಳ್ಳಿದಳೇ ಪತ್ನಿ?
Raichur – ಮದುವೆ ಆಮಂತ್ರಣ ಪತ್ರಿಕೆ, ಶಾಲಾ ದಾಖಲಾತಿಗಳು ಆಧಾರ!
ಜುಲೈ 19 ರಂದು, ಅಧಿಕಾರಿಗಳ ತಂಡ ತಾತಪ್ಪನ ಕುಟುಂಬಸ್ಥರನ್ನು ವಿಚಾರಣೆ ನಡೆಸಿತು. ಈ ವೇಳೆ, ಅವರ ಮದುವೆ ಆಮಂತ್ರಣ ಪತ್ರಿಕೆ ಹಾಗೂ ಶಾಲಾ ದಾಖಲಾತಿಗಳನ್ನು ಪರಿಶೀಲಿಸಲಾಯಿತು. ಈ ದಾಖಲೆಗಳ ಪರಿಶೀಲನೆ ವೇಳೆ, ಬಾಲಕಿಯ ನಿಜವಾದ ವಯಸ್ಸು ದೃಢಪಟ್ಟಿದೆ. ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.
Raichur – ಅಪ್ರಾಪ್ತೆಯ ರಕ್ಷಣೆ, ಹೆಚ್ಚಿನ ತನಿಖೆ ಶುರು!
ತಾತಪ್ಪ ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ, ಯಾದಗಿರಿ ಮಕ್ಕಳ ರಕ್ಷಣಾ ಘಟಕವು ತಕ್ಷಣ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಅಪ್ರಾಪ್ತೆಯನ್ನು ರಕ್ಷಿಸಿ, ಯಾದಗಿರಿ ಜಿಲ್ಲಾ ಬಾಲಕಿಯರ ಬಾಲಮಂದಿರಕ್ಕೆ ಸ್ಥಳಾಂತರಿಸಲಾಗಿದೆ. ಮಹಿಳಾ ಪೊಲೀಸರಿಂದ ಮುಂದಿನ ತನಿಖೆ ಶುರುವಾಗಲಿದೆ.