ಸನಾತನ ಹಿಂದೂ ಧರ್ಮ (Sanathana Dharma) ಉಳಿಯಬೇಕಾದರೆ ನಮ್ಮ ಭಾರತದ ಹಿಂದೂಗಳು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಅವರವರ ಪದ್ಧತಿ – ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಕಾಲಕಾಲಕ್ಕೆ ಅನುಷ್ಠಾನ ಮಾಡಿಕೊಂಡು ಹೋದರೆ ಸನಾತನ ಹಿಂದೂ ಸಂಸ್ಕೃತಿ ಹಾಗೂ ಪರಂಪರೆ ಉಳಿಯುತ್ತದೆ ಎಂದು ಎಲ್ಲೋಡು ಶ್ರೀ ಲಕ್ಷ್ಮಿ ಆದಿನಾರಾಯಣ ಸ್ವಾಮಿ ಬ್ರಾಹ್ಮಣ ಸಂಘದ ಅಧ್ಯಕ್ಷ ಸಿ.ಪಿ. ಸೂರ್ಯಪ್ರಕಾಶ್ ತಿಳಿಸಿದರು.
ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ನಡೆದ ಸರ್ವ ಪಿತೃ ತರ್ಪಣ ಕಾರ್ಯಕ್ರಮದಲ್ಲಿ ಸೇವಾ ಕರ್ತರನ್ನು ಸನ್ಮಾನಿಸಿ ಮಾತನಾಡಿದರು. ಸನಾತನ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇತ್ತೀಚಿಗೆ ಹಲವಾರು ಕಾರಣಗಳಿಂದ ನಮ್ಮ ಸನಾತನ ಧರ್ಮ ಅವನತಿಯತ್ತ ಸಾಗುತ್ತಿದೆ. ನಮ್ಮ ಧರ್ಮವನ್ನು ನಾವು ಕಾಪಾಡಲು ಮುಂದಾಗಬೇಕು. ಹಿಂದೂಗಳು ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಆಚಾರ ವಿಚಾರ, ಸಂಪ್ರದಾಯಗಳನ್ನು ಪಾಲಿಸಬೇಕು ಎಂದರು.
ಸಭೆಯಲ್ಲಿ ಸೇವಕರ್ತರು ಮತ್ತು ದಾನಿಗಳಾದ ಶೈಲಜಾ ಸತ್ಯನಾರಾಯಣರಾವ್ ಮತ್ತು ಕಮಲ್ ರವರನ್ನು ಸನ್ಮಾನಿಸಲಾಯಿತು. 250 ಕ್ಕೂ ಹೆಚ್ಚು ಜನ ವಿಪ್ರರು ಕೋಲಾರ, ಬೆಂಗಳೂರು, ತುಮಕೂರು, ಅನಂತಪುರ ಸೇರಿದಂತೆ ಬೇರೆ ಬೇರೆ ಊರುಗಳಿಂದ ಆಗಮಿಸಿದ್ದರು. ಈ ತರ್ಪಣ ಕಾರ್ಯಕ್ರಮದ ಪೌರೋಹಿತ್ಯವನ್ನು ಮಂಕಾಲ ಸಹೋದರರಾದ ವೇದಬ್ರಹ್ಮಶ್ರೀ ವೇಣುಗೋಪಾಲ ಶರ್ಮಾಜಿ ಮತ್ತು ಜ್ವಾಲಾಪ್ರಸಾದ್ ಶರ್ಮಾ ವಹಿಸಿದ್ದರು.
ಈ ವೇಳೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ. ನಾಗಭೂಷಣ್ ರಾವ್, ಚಿಕ್ಕಬಳ್ಳಾಪುರ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ ಮೂರ್ತಿ, ಜಿಲ್ಲಾ ಉಲಚುಕಮ್ಮೆ ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಎಸ್. ರಮೇಶ್. ಗುಡಿಬಂಡೆ ತಾಲೂಕು ಅಧ್ಯಕ್ಷ ಕಾರ್ತಿಕ್ ಶ್ರೀನಿವಾಸ್, ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಸಿ. ಎನ್.ದಕ್ಷಿಣಾಮೂರ್ತಿ, ಪ್ರದಾನ ಕಾರ್ಯದರ್ಶಿ ನಾರಾಯಣರಾವ್, ಸಹ ಕಾರ್ಯದರ್ಶಿ ಬಿ. ಆರ್. ಶ್ರೀನಿವಾಸ್, ಖಜಾಂಚಿ ಸಿ.ಪಿ. ರಾಘವೇಂದ್ರ, ನಿರ್ದೇಶಕರಾದ ಬಿ. ಆರ್. ವೆಂಕಟೇಶ್, ಸಿ. ಎಸ್. ಶ್ರೀನಾಥ್, ಹುಣಸೆನಹಳ್ಳಿ ಅಡುಗೆ ಕಂಟ್ರಾಕ್ಟರ್ ರವಿ ಮತ್ತು ನಿವೃತ್ತ ಹಿರಿಯ ಪದಾಧಿಕಾರಿಗಳಾದ ಎ. ರಾಮಚಂದ್ರರಾವ್ ಮತ್ತು ಪಿ. ಎನ್.ಪ್ರಭಾಕರರಾವ್ ಪಾಲ್ಗೊಂಡಿದ್ದರು.