ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವಂತಹ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನು ಎಸ್.ಐ.ಟಿ ತನಿಖೆ ಚುರುಕುಗೊಳಿಸಿದೆ. ನಿನ್ನೆಯಷ್ಟೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ರವರನ್ನು ಎಸ್.ಐ.ಟಿ. ಅಧಿಕಾರಿಗಳು ಬಂಧನ ಮಾಡಿದ್ದರು. ಈಗಾಗಲೇ ವಿದೇಶಗಳಲ್ಲಿರುವ ಪ್ರಜ್ವಲ್ ನನ್ನು ಸಹ ಬಂಧನ ಮಾಡಲು ಎಸ್.ಐ.ಟಿ ತಯಾರಿ ನಡೆಸುತ್ತಿದೆ. ಪ್ರಜ್ವಲ್ ಬಂಧನಕ್ಕೆ ಲುಕ್ ಔಟ್ ನೋಟಿಸ್ ಸಹ ಜಾರಿ ಮಾಡಲಾಗಿದ್ದು, ಇಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಆಗಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ವಿಮಾನ ನಿಲ್ದಾಣದ ಇಮಿಗ್ರೇಷನ್ ಬಳಿಯೇ ಪ್ರಜ್ವಲ್ ನನ್ನು ಬಂಧನ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಪೆನ್ ಡ್ರೈವ್ ಪ್ರಕರಣದ ನಿಮಿತ್ತ ಪ್ರಜ್ವಲ್ ರೇವಣ್ಣ ರಿಗೆ ಲುಕ್ ಔಟ್ ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್, ಕೊಚ್ಚಿ, ಗೋವಾ, ಮಂಗಳೂರು ಅಥವಾ ಬೆಂಗಳೂರಿನ ಯಾವುದೇ ವಿಮಾನ ನಿಲ್ದಾಣಕ್ಕೆ ಬಂದರೂ ಅಲ್ಲಿಯೇ ಬಂಧನ ಮಾಡುವ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಬಳಿಕ ಪ್ರಜ್ವಲ್ ರನ್ನು ಬೆಂಗಳೂರಿಗೆ ಕರೆತರಲಿದ್ದಾರೆ. ಇನ್ನೂ ಇಂದು ದುಬೈನಿಂದ 4 ವಿಮಾನಗಳು ಮಂಗಳೂರಿಗೆ ಆಗಮಿಸಲಿದ್ದು, ಈ ವಿಮಾನಗಳಲ್ಲಿ ಪ್ರಜ್ವಲ್ ಬರಬಹುದೆಂದು ಹೇಳಲಾಗುತ್ತಿದೆ.
ಇನ್ನೂ ಹಾಸನದ ಆರ್.ಸಿ. ನಗರದಲ್ಲಿರುವ ಪ್ರಜ್ವಲ್ ರೇವಣ್ಣ ರವರ ಸರ್ಕಾರಿ ನಿವಾಸದಲ್ಲಿ ಎಸ್.ಐ.ಟಿ ಅಧಿಕಾರಿಗಳು ನಿನ್ನೆ 5 ಗಂಟೆಗಳ ಕಾಲ ಮಹಜರು ನಡೆಸಿದ್ದಾರೆ. ಪ್ರಜ್ವಲ್ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ ಅವರ ಆಪ್ತ ಸಹಾಯಕರ ಬಳಿಯಿದ್ದ ಮನೆಯ ಕೀ ವಶಕ್ಕೆ ಪಡೆದಿದ್ದಾರೆ. ಇಬ್ಬರು ಸಂತ್ರಸ್ತೆಯರನ್ನು ಕರೆತಂದು ಅವರ ಸಮ್ಮುಖದಲ್ಲಿ ಮಹಜರು ನಡೆಸಿ ಕೆಲವೊಂದು ಮಹತ್ವದ ಮಾಹಿತಿಗಳನ್ನು ಸಹ ಕಲೆ ಹಾಕಿದ್ದರು. ಸದ್ಯ ಈ ಪ್ರಕರಣದ ಕಾರಣದಿಂದ ದೇಶದಿಂದ ದೇಶಕ್ಕೆ ಎಸ್ಕೇಪ್ ಆಗುತ್ತಿರುವ ಪ್ರಜ್ವಲ್ ರೇವಣ್ಣ ನೇರವಾಗಿ ಬಂದು ಸರಂಡರ್ ಆಗುತ್ತಾರಾ ಅಥವಾ ಪೊಲೀಸರೇ ಆತನನ್ನು ಬಂಧನ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.