ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರು ಇಲ್ಲದೇ ಇದಿದ್ದರೇ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಕ್ಕೆ ಮೀಸಲಾತಿಯನ್ನು ನೀಡುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ನೆಹರೂ ಮಾತ್ರವಲ್ಲದೇ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಸಹ ಮೀಸಲಾತಿಯ ವಿರುದ್ದವಾಗಿದ್ದರು ಎಂದು ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪೂರ್ವ ಚಂಪಾರಣ್ಯ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಚುನಾವಣಾ ರಾಲಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಮೋದಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಸಮಾನತೆಯ ದೃಷ್ಟಿಯಿಂದ ಶೋಷಿತ ವರ್ಗಗಳಾದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಸಂವಿಧಾನದಲ್ಲಿ ಮೀಸಲು ಕಲ್ಪಿಸಿದ್ದರು. ಒಂದು ವೇಳೆ ಅವರು ಇಲ್ಲದೇ ಇದಿದ್ದರೇ ಶೋಷಿತ ವರ್ಗಕ್ಕೆ ಮೀಸಲು ನೀಡುವ ಬದಲು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲು ನೀಡುತ್ತಿದ್ದರು. ತಾವು ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯದ ಮೀಸಲಿಗೆ ವಿರೋಧ ಹೊಂದಿರುವ ವಿಚಾರವನ್ನು ಸ್ವತಃ ನೆಹರೂ ರವರೇ ಅಂದಿನ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ತಿಳಿಸಿದ್ದರು ಎಂದು ನರೇಂದ್ರ ಮೋದಿಯವರಯ ಅಂದು ನೆಹರು ಬರೆದ ಪತ್ರವನ್ನು ಸಹ ಓದಿದರು.
ಈಗಲೂ ಸಹ ಇಂಡಿಯಾ ಕೂಟದ ನಾಯಕರು ತಮ್ಮ ಅಲ್ಪಸಂಖ್ಯಾತರ ತುಷ್ಠೀಕರಣದ ಕಾರ್ಯಸಾಧನೆಗಾಗಿ ಸಂವಿಧಾನವನ್ನೆ ಬದಲಿಸುವ ಪ್ಲಾನ್ ಮಾಡಿದ್ದಾರೆ. ಈ ರೀತಿಯಲ್ಲಿ ವೋಟ್ ಜಿಹಾದ್, ಭ್ರಷ್ಟಾಚಾರ, ತುಷ್ಟೀಕರಣ ಸೇರಿದಂತೆ ಇಂಡಿ ಕೂಟದ ಪಾಪಕೃತ್ಯಗಳು ದೇಶದ ಪ್ರಗತಿಗೆ ಮಾರಕವಾಗಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದರು. ಕೆಲವು ವಿಪಕ್ಷ ನಾಯಕರು ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದಾರೆ. ಬಡತನ ಎಂದರೇ ಏನು ಎಂಬುದು ಅವರಿಗೆ ಗೊತ್ತಿಲ್ಲ. ಆದ್ದರಿಂದ ಬಡವರು ತುತ್ತು ಅನ್ನಕ್ಕೆ ಕಷ್ಟ ಪಡುತ್ತಿದ್ದ ವೇಳೆ ಅವರು ಸ್ವಿಸ್ ಬ್ಯಾಂಕ್ ನಲ್ಲಿ ಹಣ ಹೂಡುತ್ತಿದ್ದರು ಎಂದು ಕಿಡಿಕಾರಿದ್ದಾರೆ. ಬಡವರ ಏಳಿಗೆಗಾಗಿ ನಾನು ಕಷ್ಟಪಡುತ್ತಿರುವುದು ಅವರ ಕಣ್ಣಿಗೆ ಕಾಣೋಲ್ಲ. ಮುಂದಿನ ಅವಧಿಯಲ್ಲಿ ದೇಶದ ಅಭಿವೃದ್ದಿ ಮತಷ್ಟು ಏರಲಿದೆ ಎಂದು ಭರವಸೆ ನೀಡಿದರು.