ಭಾರತ ಸರ್ಕಾರ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಪ್ರಧಾನ ಮಂತ್ರಿ ಇಂಟರ್ನ್ ಶಿಪ್ (PM Internship Scheme) ಯೋಜನೆಗೆ ಚಾಲನೆ ಸಿಕ್ಕಿದೆ. ಯುವ ಸಮುದಾಯದ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿ ಮಾಡಿದೆ. ಸುಮಾರು ಎಂಟು ನೂರು ಕೋಟಿ ರೂಪಾಯಿಗಳ ಈ ಯೋಜನೆಯ ಬಗ್ಗೆ ಈ ವರ್ಷದ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಅದರಂತೆ ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ತರಬೇತಿ ನೀಡುವ ಯೋಜನೆ ಇದಾಗಿದೆ. ಅದರ ಭಾಗವಾಗಿಯೇ ಆರಂಭದಲ್ಲಿ 1 ಲಕ್ಷ ಯುವಕರಿಗೆ ತರಬೇತಿ ಹಾಗೂ ತರಬೇತಿ ಸಮಯದಲ್ಲಿ ಸ್ಟೈಫಂಡ್ ಸಹ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಸುಮಾರು ಐನೂರು ಕಂಪನಿಗಳಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಮುಖ್ಯ ಧ್ಯೇಯ ಈ ಯೋಜನೆ ಹೊಂದಿದೆ. ಈಗಾಗಲೇ ನೂರಾರು ಕಂಪನಿಗಳು ಉದ್ಯೋಗ ನೀಡಲು ಪ್ರಸ್ತಾವ ಸಹ ಕಳುಹಿಸಿದೆ. ತರಬೇತಿ ಸಮಯದಲ್ಲಿ ಉತ್ತಮ ಸಾಧನೆ ತೋರಿದರೇ ಅಂತವರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಸಹ ಸಿಗಲಿದೆ. ಈ ಇಂಟರ್ನ್ ಶಿಪ್ ಗೆ 10 ಹಾಗೂ 12ನೇ ತರಗತಿ ಪಾಸ್ ಆದವರಿಗೆ ಉದ್ಯೋಗ ಕಲ್ಪಿಸುವ ಈ ಯೋಜನೆಯ ಲಾಭ ಪಡೆಯಲು, ಅರ್ಜಿ ಸಲ್ಲಿಸುವವರ ಆದಾಯ ವಾರ್ಷಿಕ 8 ಲಕ್ಷಕ್ಕೂ ಕಡಿಮೆ ಇರಬೇಕು. ಐಐಟಿ ಅಥವಾ ಐಐಎಂ ಗಳಂತಹ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದಂತಹವರನ್ನು ಈ ಯೋಜನೆಯಿಂದ ಹೊರಗಿಡಲಾಗಿದ್ದು, ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ಕೌಶಲ್ಯ ಕೇಂದ್ರಗಳ ಯುವಕರು ಈ ಇಂಟರ್ನ್ ಶಿಪ್ ನಲ್ಲಿ ಭಾಗವಹಿಸಬಹುದಾಗಿದೆ ಎನ್ನಲಾಗಿದೆ.
ಉದ್ಯೋಗಾವಕಾಶ ಕಡಿಮೆ ಇರುವ, ಕಡಿಮೆ ಕೌಶಲ್ಯ ಹೊಂದಿರುವ ಯುವಕರಿಗೆ ನೈಜ ಕೆಲಸದ ಅನುಭವ ಮತ್ತು ಅಗತ್ಯ ಕೌಶಲ್ಯ ಒದಗಿಸಲು ಇಂಟರ್ನ್ಶಿಪ್ ಸ್ಕೀಮ್ ಆರಂಭಿಸಲಾಗಿದೆ. ದೇಶದ ಅಗ್ರಮಾನ್ಯ 500 ಕಾರ್ಪೊರೇಟ್ ಕಂಪನಿಗಳಲ್ಲಿ ಯುವಕ ಮತ್ತು ಯುವತಿಯರು ಒಂದು ವರ್ಷ ಇಂಟರ್ನ್ಶಿಪ್ ಮಾಡಬಹುದು. ಇಂಟರ್ನ್ಶಿಪ್ ಪಡೆಯಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು, ನಿಗದಿತ ಪೋರ್ಟಲ್ನಲ್ಲಿ ನೊಂದಾಯಿಸಿಕೊಳ್ಳಬೇಕು. ಆಧಾರ್ ದಾಖಲೆಗಳ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ, ತಮ್ಮ ಪ್ರೊಫೈಲ್ ರಚಿಸಬೇಕು. ಕಾರ್ಪೊರೇಟ್ ಕಂಪನಿಗಳೂ ಕೂಡ ಪ್ರತ್ಯೇಕವಾಗಿ ಈ ಪೋರ್ಟಲ್ನಲ್ಲಿ ತಮ್ಮ ಇಂಟರ್ನ್ಶಿಪ್ ಅಗತ್ಯತೆಗಳನ್ನು ನಮೂದಿಸಬೇಕು. ಈ ಇಂಟರ್ನ್ಶಿಪ್ ಕೆಲಸಗಳಿಗೆ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಕಂಪನಿಗಳು ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.
ಪೋಸ್ಟ್ ಇಲ್ಲಿದೆ ನೋಡಿ: https://x.com/mygovindia/status/1841863604691480618
ಇನ್ನೂ 12-ತಿಂಗಳ ಇಂಟರ್ನ್‌ಶಿಪ್‌ಗಳಲ್ಲಿ ಆಯ್ಕೆಯಾದವರಿಗೆ ರೂ 5,000 ಮಾಸಿಕ ಸ್ಟೈಫಂಡ್ ಸೇರಿದಂತೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಸರ್ಕಾರದಿಂದ ರೂ 4,500 ಮತ್ತು ಕಂಪನಿಯ ಸಿಎಸ್‌ಆರ್ ನಿಧಿಯಿಂದ ರೂ 500. ಹೆಚ್ಚುವರಿಯಾಗಿ ನೀಡಲಾಗುತ್ತದೆ. ಇಂಟರ್ನ್‌ಗಳಿಗೆ ರೂ 6,000 ಒಂದು ಬಾರಿಯ ಅನುದಾನವನ್ನು ಕೂಡ ನೀಡಲಾಗುತ್ತದೆ. 21-24 ವರ್ಷದೊಳಗಿನ ಅರ್ಹ ಯುವಕರು, ಕೆಲವು ಶೈಕ್ಷಣಿಕ ಮತ್ತು ಉದ್ಯೋಗದ ಮಾನದಂಡಗಳನ್ನು ಪೂರೈಸುವವರು ಅರ್ಜಿ ಸಲ್ಲಿಸಬಹುದು. https://www.pminternship.mca.gov.in ಇಲ್ಲಿ ಅಕ್ಟೋಬರ್ 12ರಿಂದ ನೊಂದಣಿ ಮಾಡಿಕೊಳ್ಳಬಹುದಾಗಿದೆ.