ಸದ್ಯ ರಾಜ್ಯದಲ್ಲಿ ರಾಮನಗರ ಹೆಸರು ಬದಲಾವಣೆಯ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ದೊಡ್ಡ ಮಟ್ಟದಲ್ಲೇ ವಾಕ್ಸಮರ ನಡೆಯುತ್ತಿದೆ. ಇದೀಗ ಈ ಕುರಿತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮಾತನಾಡಿದ್ದು, ಬ್ರ್ಯಾಂಡ್ ಬೆಂಗಳೂರು (Brand Bengaluru) ಹೆಸರಲ್ಲಿ ರಾಮನಗರದ (Ramanagara) ಇತಿಹಾಸ ಅಳಿಸುವ ಕೆಲಸ ಆಗುತ್ತಿದೆ ಎಂದು ಆಕ್ರೋಷ ಹೊರಹಾಕಿದ್ದಾರೆ.
ಕಳೆದೆರಡು ದಿನಗಳ ಹಿಂದೆಯಷ್ಟೆ ಸಚಿವ ಸಂಪುಟ ರಾಮನಗರ ಹೆಸರು ಬದಲಾವಣೆಗೆ ಅನುಮೋದನೆ ಮಾಡಿರುವ ಬಗ್ಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮಾದ್ಯಮಗಳೊಂದಿಗೆ ಮಾತನಾಡಿದ್ದಾರೆ. ರಾಮನಗರ ರಾಮನ ಪಾದ ಸ್ಪರ್ಶದಿಂದ ಪುಣ್ಯಕ್ಷೇತ್ರವಾಗಿದೆ. ಆದರೆ ರಾಜಕೀಯ ಉದ್ದೇಶದಿಂದ ಇದೀಗ ರಾಮನಗರ ಹೆಸರು ಬದಲಾವಣೆ ಮಾಡಲಾಗುತ್ತಿದೆ. ರಾಮನಗರ ಜಿಲ್ಲೆಯಾದಾಗ ಯಾರೂ ಇದಕ್ಕೆ ನಕಾರ ಎತ್ತಲಿಲ್ಲ. ರಾಮನಗರ ಹೆಸರಿಗೆ ಆಗ ಯಾರು ವಿರೋಧ ಸಹ ಮಾಡಲಿಲ್ಲ. ಇದೀಗ ಹೆಸರು ಬದಲಾವಣೆಯಾದರೆ ಜನರು ತುಂಬಾ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ರೇಷನ್ ಕಾರ್ಡ್, ರೆವೆನ್ಯೂ ದಾಖಲಾತಿ, ಆಧಾರ್ ಕಾರ್ಡ್ ಹೀಗೆ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಜನರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಉದ್ಬವಿಸುತ್ತದೆ ಎಂದರು.
ಇನ್ನೂ ಈ ಕುರಿತು ದೊಡ್ಡ ಹೋರಾಟ ಮಾಡುವ ನಿಟ್ಟಿನಲ್ಲಿ ಚರ್ಚೆ ಮಾಡಡಲಾಗುತ್ತಿದೆ. ಜು.28 ರಂದು ಕೇಂದ್ರ ಸಚಿವ ಕುಮಾರಣ್ಣ ಹಾಗೂ ಬಿಜೆಪಿ ನಾಯಕರ ಜೊತೆಗೆ ಚರ್ಚೆ ಮಾಡಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಇದೇ ಸಮಯದಲ್ಲಿ ರಾಮನಗರ ಹೆಸರು ಬದಲಾವಣೆಗೆ ಹಾಸನದವರ ವಿರೋಧ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕೌಂಟರ್ ಕೊಟ್ಟ ನಿಖಿಲ್ ಕುಮಾರಸ್ವಾಮಿ, ರಾಮನಗರದ ಟೋಕನ್ ಶಾಸಕರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯೋದು ಬಿಟ್ಟು ಜನರ ಕೆಲಸ ಮಾಡಲಿ ಎಂದು ಟಾಂಗ್ ಕೊಟ್ಟರು.