National Farmers Day – ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಜಗದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಅನ್ನ ನೀಡುವ ನಿಸ್ವಾರ್ಥ ಕಾರ್ಯ ಮಾಡುತ್ತಿರುವ ರೈತರನ್ನು ನಾವು ಸದಾ ಗೌರವಿಸಿ ಸ್ಮರಿಸಬೇಕೆ ವಿನಃ ಅವರನ್ನು ಕಡೆಗಣನೆ ಮಾಡುವುದು ಬೇಡ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ.ಎಸ್.ನಾಗರಾಜ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ಕೃಷಿ ಇಲಾಖೆ, ತಾಲೂಕು ಕೃಷಿಕ ಸಮಾಜ. ಆತ್ಮ ಯೋಜನೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಒಬ್ಬ ರೈತ ಏನೆ ಸಮಸ್ಯೆ ಬಂದರೂ ಕೃಷಿಯನ್ನು ಮಾತ್ರ ಬಿಡುವುದಿಲ್ಲ. ಲಾಭ ಬರಲಿ, ನಷ್ಟ ಬರಲಿ ಕೃಷಿ ಚಟುವಟಿಕೆಯನ್ನು ಮಾತ್ರ ಬಿಡುವುದಿಲ್ಲ. ಇಂದು ರೈತ ತುಂಬಾ ಸಂಕಷ್ಟದಲ್ಲಿದ್ದಾನೆ. ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆತನು ಬೆಳೆ ಚೆನ್ನಾಗಿ ಬಂದರೇ ಬೆಲೆ ಸಿಗುವುದಿಲ್ಲ, ಬೆಲೆ ಇದ್ದಾಗ ಇಳುವರಿ ಸಿಗುವುದಿಲ್ಲ. ಅದರ ಜೊತೆಗೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಕಾಟ. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ. ಇನ್ನೂ ಕೆಲವೊಂದು ದೇಶಗಳಲ್ಲಿ ರೈತರು ತುಂಬಾ ಶಿಸ್ತುಬದ್ದವಾಗಿ ಕೃಷಿಯನ್ನು ಕೈಗೊಳ್ಳುತ್ತಾರೆ. ಒಬ್ಬ ರೈತ ಯಾವ ಬೆಳೆ ಎಷ್ಟು ಬೆಳೆಯಬೇಕು ಎಂಬುದನ್ನು ಅಲ್ಲಿನ ಸರ್ಕಾರವೇ ನಿಗಧಿ ಮಾಡುತ್ತದೆ. ನಮ್ಮಲ್ಲಿ ಒಬ್ಬ ರೈತ ಯಾವುದಾದರೂ ಒಂದು ಬೆಳೆಯಲ್ಲಿ ಒಳ್ಳೆಯ ಲಾಭ ಪಡೆದರೇ, ಎಲ್ಲ ರೈತರೂ ಅದೇ ಬೆಳೆಯನ್ನು ಇಡಲು ಶುರು ಮಾಡುತ್ತಾರೆ. ಫಸಲು ಬಂದಾಗ ಕಡಿಮೆ ಬೆಲೆಗೆ ಮಾರಾಟ ಮಾಡುವಂತಹ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ಇದೇ ಮಾದರಿಯಲ್ಲಿ ಕೃಷಿಯನ್ನು ಕೈಗೊಳ್ಳಲು ರೈತರಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಮುಂದಾಗಬೇಕೆಂದರು.

ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮಾತನಾಡಿ, ಇಂದು ರೈತರು ಕೃಷಿಯನ್ನು ಕೈಗೊಳ್ಳಲಾಗದೇ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಭೂಮಿಯನ್ನು ಮಾರಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾನೆ. ಅದಕ್ಕೆ ಕಾರಣ ಸರ್ಕಾರವೂ ಸಹ. ಸರ್ಕಾರಗಳು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ, ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯ ಸೌಲಭ್ಯಗಳನ್ನು ನೀಡದೇ ಇರುವುದರಿಂದ ಈ ರೀತಿಯ ಸಮಸ್ಯೆ ಉದ್ಬವವಾಗಿದೆ. ಸದ್ಯ ತಾಲೂಕಿನಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆಯದೇ ಬಾಗೇಪಲ್ಲಿಯಲ್ಲಿ ಖರೀದಿ ಕೇಂದ್ರ ತೆರೆದಿದ್ದಾರೆ. ಈ ಕುರಿತು ಕೇಳಿದರೇ ಸಂಬಂಧಪಟ್ಟ ಅಧಿಕಾರಿಗಳು ಬೇರೆಯದ್ದೆ ಕಾರಣಗಳನ್ನು ನೀಡುತ್ತಾರೆ. ರಾಗಿ ಬೆಂಬಲ ಬೆಲೆ ಯೋಜನೆಯಡಿ ನೊಂದಣಿ ಮಾಡಿಕೊಂಡ ರೈತರು ಯಾವುದೇ ಕಾರಣಕ್ಕೂ ಬಾಗೇಪಲ್ಲಿಗೆ ರಾಗಿಯನ್ನು ತೆಗೆದುಕೊಂಡು ಹೋಗಬೇಡಿ. ತಾಲೂಕು ಮಟ್ಟದ ಅಧಿಕಾರಿಗಳು ಕೂಡಲೇ ರಾಗಿ ಖರೀದಿ ಕೇಂದ್ರವನ್ನು ಗುಡಿಬಂಡೆಯಲ್ಲೇ ತೆರೆಯಲು ಅಧಿಕೃತ ಆದೇಶ ಬರುವಂತೆ ಮಾಡಬೇಕೆಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ, ಕೃಷಿಕ ಸಮಾಜದ ನೂತನ ನಿರ್ದೇಶಕ ಮಂಜುನಾಥರೆಡ್ಡಿ ಸೇರಿದಂತೆ ಹಲವರು ರೈತ ದಿನಾಚರಣೆಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ವಿಶ್ವನಾಥ್, ರವರು ರಾಗಿ ಬೆಳೆಯ ಕುರಿತು ಕೆಲವೊಂದು ತಾಂತ್ರಿಕ ಮಾಹಿತಿಯನ್ನು ರೈತರಿಗೆ ನೀಡಿದರು. ರಾಗಿ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆದು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ನಾಲ್ಕು ರೈತರನ್ನು ಕೃಷಿ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನಾಗಮಣಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಣೇಶ್, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಶಂಕರಯ್ಯ, ತಾಲೂಕು ರೈತ ಸಂಘದ ಸೋಮಶೇಖರ್, ಕೃಷಿಕ ಸಮಾಜದ ನೂತನ ನಿರ್ದೇಶಕರು, ವಾಹಿನಿ ಸಂಸ್ಥೆಯ ಸುರೇಶ್, ಕೃಷಿ ಇಲಾಖೆಯ ಜಯಣ್ಣ, ಜ್ಯೋತಿ, ರಾಜಕುಮಾರ್, ವೆಂಕಟನಾರಾಯಣ, ಶ್ರೀನಿವಾಸರೆಡ್ಡಿ, ಬೈರಾರೆಡ್ಡಿ ಸೇರಿದಂತೆ ಹಲವರು ಇದ್ದರು.