Mysore – ನಮ್ಮ ಮಕ್ಕಳ ಭವಿಷ್ಯ ಅರಳಬೇಕಾದ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದಿರುವ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಸಹಪಾಠಿಗಳ ವಿಕೃತ ರ‍್ಯಾಗಿಂಗ್ ಮತ್ತು ಭೀಕರ ಹಲ್ಲೆಗೆ ಒಳಗಾದ 8ನೇ ತರಗತಿಯ ಬಾಲಕನೊಬ್ಬ, ತನ್ನ ಒಂದು ವೃಷಣವನ್ನೇ ಕಳೆದುಕೊಳ್ಳುವ ದುರಂತಕ್ಕೆ ಸಿಲುಕಿದ್ದಾನೆ. ಮೈಸೂರು ನಗರದ ಜಯಲಕ್ಷ್ಮೀಪುರಂನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Mysore – ಗುಪ್ತಾಂಗಕ್ಕೆ ಒದ್ದು ಅಟ್ಟಹಾಸ
ಘಟನೆ ನಡೆದು ಒಂದು ತಿಂಗಳಾಗಿದ್ದರೂ, ಇದರ ಭೀಕರತೆ ಈಗ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. 13 ವರ್ಷದ ಬಾಲಕ ತರಗತಿಯ ನಾಯಕನಾಗಿದ್ದ. ಇದರಿಂದ ಕೋಪಗೊಂಡ ಆತನದ್ದೇ ತರಗತಿಯ ಮೂವರು ವಿದ್ಯಾರ್ಥಿಗಳು ಪ್ರತಿದಿನ ಆತನಿಗೆ ರ್‍ಯಾಗಿಂಗ್ ಮಾಡುತ್ತಿದ್ದರು. ಪದೇ ಪದೇ ಆಗುತ್ತಿದ್ದ ಕಿರುಕುಳದಿಂದ ಬೇಸತ್ತ ಸಂತ್ರಸ್ತ ಬಾಲಕ, ಈ ವಿಷಯವನ್ನು ಶಾಲಾ ಶಿಕ್ಷಕರಿಗೆ ತಿಳಿಸಿದ್ದ. ಇದೇ ಕಾರಣಕ್ಕೆ ಆ ಮೂವರು ಆರೋಪಿ ಬಾಲಕರು ಅಕ್ಟೋಬರ್ 25ರಂದು ಆತನನ್ನು ಶೌಚಾಲಯಕ್ಕೆ ಕರೆದೊಯ್ದು ಗುಪ್ತಾಂಗಕ್ಕೆ ಕಾಲಿನಿಂದಲೇ ಒದ್ದು ಗಂಭೀರ ಗಾಯಗೊಳಿಸಿದ್ದಾರೆ. ಮಕ್ಕಳಲ್ಲಿ ಈ ಮಟ್ಟದ ವಿಕೃತಿ ಮೆರೆದಿರುವುದು ನಿಜಕ್ಕೂ ಆಘಾತಕಾರಿ.
Mysore – ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕ
ಶಾಲೆಯಲ್ಲಿ ನಡೆದ ಘಟನೆಯನ್ನು ಬಾಲಕ ಮನೆಗೆ ಬಂದು ಪೋಷಕರಿಗೆ ತಿಳಿಸುತ್ತಿದ್ದಂತೆಯೇ, ಅವರು ಗಾಬರಿಗೊಂಡು ಮಗನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಪರೀಕ್ಷೆ ನಡೆಸಿದಾಗ ಗಾಯವು ಅತ್ಯಂತ ಗಂಭೀರವಾಗಿರುವುದು ಕಂಡುಬಂದಿದೆ. ಪರಿಸ್ಥಿತಿ ಕೈಮೀರುತ್ತಿದ್ದ ಕಾರಣ, ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು. ಅನಿವಾರ್ಯವಾಗಿ ಗಂಭೀರ ಪೆಟ್ಟು ಬಿದ್ದಿದ್ದ ಬಾಲಕನ ಒಂದು ವೃಷಣವನ್ನೇ ತೆಗೆದ ಪ್ರಸಂಗ ನಡೆದಿದೆ. ತಮ್ಮ ಮಗನಿಗೆ ಇಂತಹ ದುಃಸ್ಥಿತಿ ಬಂದಿದ್ದಕ್ಕೆ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
Mysore – ದೂರು ಕೊಟ್ಟರೂ ನಿರ್ಲಕ್ಷ್ಯದ ಆರೋಪ
ಇಡೀ ದುರಂತ ಘಟನೆಗೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂಬುದು ಪೋಷಕರ ಅಳಲು. ಕಣ್ಣೀರು ಹಾಕುತ್ತಿರುವ ಪೋಷಕರು, “ನಮ್ಮ ಮಗನಿಗೆ ಪ್ರತಿದಿನ ರ್‍ಯಾಗಿಂಗ್ ಆಗುತ್ತಿದೆ ಎಂದು ಹಲವು ಬಾರಿ ಶಾಲೆಯ ಶಿಕ್ಷಕರಿಗೆ ದೂರು ನೀಡಿದ್ದೆವು. ಆದರೆ, ಶಾಲೆಯವರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ” ಎಂದು ಆರೋಪಿಸಿದ್ದಾರೆ. Read this also : 14 ರ ಬಾಲಕನಿಂದ 40 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ- ಕೊಲೆ, ಉತ್ತರ ಪ್ರದೇಶದಲ್ಲಿ ನಡೆದ ಘಟನೆ..!
ಅಷ್ಟೇ ಅಲ್ಲದೆ, ಶಾಲೆಯ ಮುಖ್ಯ ಶಿಕ್ಷಕಿಯು ದೂರು ನೀಡಲು ಹೋದ ಪೋಷಕರೊಂದಿಗೆ ಉಡಾಫೆಯಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಶಾಲಾ ಆಡಳಿತ ಮಂಡಳಿ ದೂರನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಇಂದು ತಮ್ಮ ಮಗ ಈ ಸ್ಥಿತಿಗೆ ತಲುಪುತ್ತಿರಲಿಲ್ಲ ಎಂಬುದು ಪೋಷಕರ ಆಕ್ರೋಶ.

“ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿದ್ದೇವೆ. ಇಷ್ಟೆಲ್ಲಾ ಆದರೂ ಶಾಲಾ ಆಡಳಿತ ಮಂಡಳಿಯಾಗಲಿ, ಯಾರೊಬ್ಬರೂ ನಮ್ಮ ಮಗನ ಆರೋಗ್ಯ ವಿಚಾರಿಸಿಲ್ಲ. ತಾಯಿಯವರು ಶಾಲೆಗೆ ಹೋದಾಗ ಅವರೊಂದಿಗೆ ಕೆಟ್ಟದಾಗಿ ಮಾತನಾಡಿ ವಾಪಸ್ ಕಳುಹಿಸಿದ್ದಾರೆ,” ಎಂದು ನೋವು ಹಂಚಿಕೊಂಡಿದ್ದಾರೆ. ಪೋಷಕರು ಪೊಲೀಸ್ ದೂರು ನೀಡಲು ಹೋದಾಗ, ಪೊಲೀಸರು ಕೂಡ ಸರಿಯಾಗಿ ಸ್ವೀಕರಿಸಿಲ್ಲ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
