ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿ ವರದಿಯಂತೆ ಭಾರತದಲ್ಲಿ 1950 ಮತ್ತು 2015ರ ನಡುವಿನ ಅವಧಿಯಲ್ಲಿ ಹಿಂದೂ ಜನಸಂಖ್ಯೆ ಶೇ.7.82 ಕಡಿಮೆಯಾಗಿದೆ. ಆದರೆ ಮುಸ್ಲಿಂರ ಸಂಖ್ಯೆ ಮಾತ್ರ ಶೇ.43.15 ಹೆಚ್ಚಾಗಿದೆ ಎಂಬ ವರದಿಯೊಂದರಲ್ಲಿ ತಿಳಿಸಿದೆ. ಕ್ರಾಸ್ ಕಂಟ್ರಿ ಅನಾಲಿಸಿಸ್ ಎಂಬ ಶೀರ್ಷಿಕೆಯ ಪತ್ರಿಕಾ ವರದಿಯಲ್ಲಿ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಇಳಿಮುಖ ಕಂಡಿದ್ದು, ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಏರಿಕೆ ಕಂಡಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ (EAC-PM) ನೀಡಿದ ವರದಿಯಲ್ಲಿ ಬಹಿರಂಗವಾಗಿದೆ. ದೇಶದಲ್ಲಿ 65 ವರ್ಷದೊಳಗಿನ ಹಿಂದೂಗಳ ಜನಸಂಖ್ಯೆ ಇಳಿಮುಖವಾಗಿದೆ. ಬಹುಸಂಖ್ಯಾತ ಧರ್ಮವಾಗಿರುವಂತಹ ಹಿಂದೂಗಳ ಜನಸಂಖ್ಯೆ 1950-2015 ನಡುವೆ ಶೇ.7.8 ರಷ್ಟು ಕಡಿಮೆಯಾಗಿದೆ. ಆದರೆ ನೆರೆಯ ದೇಶಗಳಲ್ಲಿ ಬಹುಸಂಖ್ಯಾತ ಸಮುದಾಯದ ಜನಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. EAC-PM ನಡೆಸಿದ ಅಧ್ಯಯನದಿಂದ ಈ ಎಲ್ಲಾ ವಿಚಾರಗಳು ತಿಳಿದುಬಂದಿದೆ.
EAC-PM ನಡೆಸಿದ ಅಧ್ಯಯನದಂತೆ ಭಾರತದಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗಿದೆ. ಆದರೆ ಮುಸ್ಲಿಂರು, ಕ್ರಿಶ್ಚಿಯನ್ನರು, ಬೌಧ್ದರು ಹಾಗೂ ಸಿಖ್ಖರು ಸೇರಿದಂತೆ ಅಲ್ಪಸಂಖ್ಯಾತರ ಪಾಲು ಹೆಚ್ಚಾಗಿದೆ, ಈ ಅವಧಿಯಲ್ಲಿ ಪಾರ್ಸಿ ಹಾಗೂ ಜೈನರ ಸಂಖ್ಯೆ ಕಡಿಮೆಯಾಗಿದೆ. ಉಳಿದಂತೆ 1950-2015 ರ ನಡುವೆ ಮುಸ್ಲಿಂ ಜನಸಂಖ್ಯೆ ಶೇ.43.15, ಕ್ರಿಶ್ಚಿಯನ್ನರ ಜನಸಂಖ್ಯೆ 5.38, ಸಿಖ್ಖರಲ್ಲಿ 6.58 ಹಾಗೂ ಬೌಧ್ದರಲ್ಲಿ ಕೊಂಚ ಹೆಚ್ಚಳವಾಗಿದೆ ಎನ್ನಲಾಗಿದೆ. 1950ರಲ್ಲಿ ಮುಸ್ಲಿಂ ಜನಸಂಖ್ಯೆಯು ಒಟ್ಟಾರೆ ಜನಸಂಖ್ಯೆಯ ಶೇ.9.84 ರಷ್ಟಿದ್ದು ಹಾಗೂ 2015ರಲ್ಲಿ ಶೇ.14.09 ರಷ್ಟು ಏರಿಕೆ ಕಂಡಿದೆ. 1950ರಲ್ಲಿ ಶೇ 84.68 ರಷ್ಟಿದ್ದ ಬಹುಸಂಖ್ಯಾತ ಹಿಂದೂ ಜನಸಂಖ್ಯೆಯಲ್ಲಿ 2015 ರಲ್ಲಿ ಶೇಕಡಾ 78.06 ಕ್ಕೆ ಕುಸಿದಿದೆ (7.82 ರಷ್ಟು ಕುಸಿತ) ಎಂದು EAC-PM ಸದಸ್ಯ ಶಮಿಕಾ ರವಿ ನೇತೃತ್ವದ ತಂಡ ಸಿದ್ದಪಡಿಸಿದ ವರದಿಯಲ್ಲಿ ಹೇಳಲಾಗಿದೆ.