ವರದಕ್ಷಿಣೆ ಸೇರಿದಂತೆ ವಿವಿಧ ಕಾರಣಗಳಿಂದ ಮದುವೆ ಮಂಟಪದಲ್ಲೇ ಅನೇಕ ಮದುವೆಗಳು ಮುರಿದುಬಿದ್ದಿರುವಂತಹ ಅನೇಕ ಘಟನೆಗಳ ಬಗ್ಗೆ ಕೇಳಿರುತ್ತೇವೆ, ಸುದ್ದಿ ಕೇಳಿರುತ್ತೇವೆ. ಇದೀಗ ಸ್ವೀಟ್ ಕಾರಣದಿಂದ ಮದುವೆಯೊಂದು ಮುರಿದು ಬಿದ್ದಿದೆ. ವರನ ಸ್ನೇಹಿತರಿಗೆ ಊಟದಲ್ಲಿ ಸ್ವೀಟ್ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಲ್ಯಾಣ ಮಂಟಪದಲ್ಲೇ ಮದುವೆ ಮುರಿದುಬಿದಿದ್ದು, ವಧು ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಘಟನೆ ನಡೆದಿದೆ.
ಕರ್ನಾಟಕದ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಹಾನಗಲ್ ಯುವತಿ ಹಾಗೂ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ತುಮಕೂರಿನ ಹರ್ಷಿತ್ ಎಂಬಾತನೊಂದಿಗೆ ಮದುವೆ ನಿಶ್ಚಯವಾಗಿತ್ತು. ವಧು ವರರಿಬ್ಬರು ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಪರಿಚಯವಾಗಿದೆ. ಬಳಿಕ ಹರ್ಷಿತ್ ಯುವತಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಅದರಂತೆ ಕಳೆದ ಶನಿವಾರ ರಾತ್ರಿ ಕೊಡಗಿನ ಸೋಮವಾರ ಪೇಟೆಯ ಜಾನಕಿ ಕನ್ವೆನ್ಷನ್ ಹಾಲ್ ನಲ್ಲಿ ವಿವಾಹ ಸಮಾರಂಭ ನಡೆಸಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿತ್ತು. ಶನಿವಾರ ರಾತ್ರಿ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ಕಾರ್ಯ ನಡೆಸಿದ್ದರು. ಭಾನುವಾರ ಮದುವೆ ನಡೆಯಬೇಕಿತ್ತು.
ಶನಿವಾರ ಸಂಜೆ ನಾಲ್ಕು ಗಂಟೆ ಸಮಯಕ್ಕೆ ಕಲ್ಯಾಣ ಮಂಟಪಕ್ಕೆ ವರ ಹಾಗೂ ಆತನ ಕುಟುಂಬಸ್ಥರು ಬಂದಿದ್ದರು. ಆದರೆ ವಧು ಕಡೆಯವರು 2 ಗಂಟೆ ತಡವಾಗಿ ಬಂದಿದ್ದರಿಂದ ಇಬ್ಬರ ನಡುವೆ ಗಲಾಟೆಯಾಗಿದೆ. ಬಳಿಕ ವರನ ಸ್ನೇಹಿತರು ಊಟಕ್ಕೆ ಕುಳಿತಾಗ ಸ್ವೀಟ್ ಖಾಲಿಯಾಗಿದೆ. ವರನ ಸ್ನೇಹಿತರಿಗೆ ಸ್ವೀಟ್ ಸಿಕ್ಕಿಲ್ಲ ಎಂಬ ಕಾರಣದಿಂದ ವಧುವಿನ ಕುಟುಂಬಸ್ಥರ ಜೊತೆಗೆ ವರ ಹರ್ಷಿತ್ ಗಲಾಟೆ ಮಾಡಿಕೊಂಡಿದ್ದಾನೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಭಾನುವಾರ ನಡೆಯಬೇಕಿದ್ದ ಮದುವೆ ಮುರಿದುಬಿದ್ದಿದೆ. ಇನ್ನೂ ಈ ಎರಡೂ ವಿಚಾರಕ್ಕೆ ವರನ ಕಡೆಯಿಂದ ಗಲಾಟೆಯಾಗಿದೆ ಎಂದು ಆರೋಪಿಸಿ ವಧು ಕಡೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಮಗಳ ಮದುವೆ ನಿಂತು ನಮಗೆ ಮರ್ಯಾದೆ ಹೋಗಿದೆ, ಅಷ್ಟೆಅಲ್ಲದೇ ಲಕ್ಷಾಂತರ ರೂಪಾಯಿ ಖರ್ಚು ಆಗಿದೆ. ಎಲ್ಲಾ ನಷ್ಟವನ್ನು ವರನ ಕಡೆಯವರು ತುಂಬಿಕೊಡಬೇಕೆಂದು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆದರೆ ವರನ ಕುಟುಂಬಕ್ಕೆ ರಾಜಕೀಯ ಹಿನ್ನೆಲೆ ಹಾಗೂ ಬೆಂಬಲ ಇರುವ ಕಾರಣದಿಂದ ವಧು ಕಡೆಯವರು ಕೊಟ್ಟ ದೂರು ಸ್ವೀಕರಿಸದೇ ತಮಗೆ ಬೇಕಾದಂತೆ ದೂರು ಬರೆದುಕೊಂಡಿದ್ದಾರೆ ಎಂದು ವಧು ಕಡೆಯವರು ಆರೋಪಿಸಿ, ನ್ಯಾಯಕ್ಕಾಗಿ ಮಾದ್ಯಮಗಳ ಮೊರೆ ಹೋಗಿದ್ದಾರೆ.