2023-24 ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕಾಗಿ ವಿದ್ಯಾರ್ಥಿ ಒಬ್ಬರು ನೇಣಿಗೆ ಶರಣಾಗಿದ್ದಾರೆ, ಮತ್ತೋರ್ವ ವಿದ್ಯಾರ್ಥಿನಿ ಪಾಸ್ ಆಗಿದ್ದರೂ ಫೇಲ್ ಆಗಿದ್ದೇನೆ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
10ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಪಾಸ್ ಆಗಿದ್ದರೂ ತಾನು ಫೇಲ್ ಆಗಿದ್ದೇನೆಂದು ಭಾವಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಹುಲಿಗೆಪುರ ಗ್ರಾಮದ ಅಮೃತಾ (16) ಎಂದು ಗುರ್ತಿಸಲಾಗಿದೆ. ಮೃತ ಅಮೃತಾ ನಗರಕೆರೆ ಗ್ರಾಮದ ಪೂರ್ಣಿಮಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಫಲಿತಾಂಶವನ್ನು ಮೊಬೈಲ್ ನಲ್ಲಿ ನೋಡಿದ್ದಾಳೆ. 400ಕ್ಕಿಂತ ಕಡಿಮೆ ಅಂಕ ಬಂದಿದೆ ನಾನು ಫೇಲ್ ಆಗಿದ್ದೇನೆ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದರೆ ಮೃತ ಅಮೃತಾ ಪರೀಕ್ಷೆಯಲ್ಲಿ ಶೇ.57ರಷ್ಟು ಫಲಿತಾಂಶ ಪಡೆದು ತೇರ್ಗಡೆಯಾಗಿದ್ದಾಳೆ. ಆದರೆ ತಾನು ಫೇಲ್ ಆಗಿದ್ದೇನೆ ಎಂದು ಭಾವಿಸಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳನ್ನು ನೋಡಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನೂ ಮಂಡ್ಯದ ಮದ್ದೂರು ತಾಲೂಕಿನ ತಗ್ಗಹಳ್ಳಿ ಎಂಬ ಗ್ರಾಮದಲ್ಲಿ ಮಹೇದವು ಎಂಬುವವರ ಪುತ್ರ ಲಿಖಿತ್ ಎಂಬ ವಿದ್ಯಾರ್ಥಿ ಸಹ ತಾನು ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪರೀಕ್ಷೆಯ ಫಲಿತಾಂಶ ನೋಡಲು ಶಾಲೆಯ ಬಳಿ ಹೋಗಿದ್ದರು. ಎರಡು ವಿಷಯಗಳಲ್ಲಿ ಲಿಖಿತ್ ಅನುತ್ತೀರ್ಣನಾಗಿದ್ದೀಯಾ ಎಂದು ಶಿಕ್ಷಕರು ಬಾಲಕನಿಗೆ ತಿಳಿಸಿದ್ದಾರೆ. ಇದರಿಂದ ಲಿಖಿತ್ ತುಂಬಾ ಬೇಸರಗೊಂಡಿದ್ದ. ಶಿಕ್ಷಕರು ಸಮಾಧಾನ ಮಾಡಿ ಮುಂದಿನ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುವಂತೆ ಧೈರ್ಯ ತುಂಬಿ ಕಳುಹಿಸಿದ್ದರು. ಆದರೆ ನಿಖಿಲ್ ತಾನು ಫೇಲ್ ಆಗಿದ್ದಕ್ಕೆ ಪೋಷಕರು ಬೈಯಬಹುದು ಎಂದು ಭಾವಿಸಿ ಮನನೊಂದಿದ್ದಾನೆ. ಬಳಿಕ ಹಸು ಕಟ್ಟಲು ಇಟ್ಟಿದ್ದ ಹಗ್ಗವನ್ನು ತೆಗೆದುಕೊಂಡು ಹೋಗಿ ಜಮೀನು ಪಕ್ಕದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನೂ ರಾಜ್ಯದ ಹಲವು ಕಡೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿದೆ. ಪರೀಕ್ಷೆಯಲ್ಲಿ ಫೇಲ್ ಆದ ಮಾತ್ರಕ್ಕೆ ಮುಗಿಯಿತು ಎನ್ನುವ ಭಾವನೆಯನ್ನು ಬಿಟ್ಟು ವಿದ್ಯಾರ್ಥಿಗಳು ಮುಂದಿನ ಪರೀಕ್ಷೆ ಎದುರಿಸಲು ಸಿದ್ದವಾಗಬೇಕು. ಜೊತೆಗೆ ಪೋಷಕರಾಗಲಿ ಅಥವಾ ಸಂಬಂಧಿಕರಾಗಲಿ ಅಥವಾ ಶಿಕ್ಷಕರಾಗಲಿ ಮಕ್ಕಳಿಗೆ ಧೈರ್ಯ ತುಂಬುವಂತಹ ಕೆಲಸ ಮಾಡಬೇಕು.