ರಾಜ್ಯದಲ್ಲಿ ಡಿ.ಇಡ್, ಬಿ.ಇಡಿ ಪೂರ್ಣಗೊಳಿಸಿರುವಂತಹ ಸಾವಿರಾರು ಸಂಖ್ಯೆಯ ನಿರುದ್ಯೋಗಿಗಳಿಗೆ ಶಿಕ್ಷಣ ಸಚಿವ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈಗಾಗಲೇ 10 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಸಿದ್ದತೆ ನಡೆದಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟ ಕೂಡಲೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆನ್ನು ಶುರು ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ.
ಬಿಜೆಪಿಯ ತಳವಾರ್ ಸಾಬಣ್ಣ ರವರು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ್ದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ತುಂಬಾನೆ ಇದೆ. ಶಿಕ್ಷಕರ ಕೊರತೆಯಿಂದ ಪ್ರತಿ ಭಾರಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ಹಿಂದೆ ಬೀಳುತ್ತಿದೆ. ಸುಮಾರು 19 ಸಾವಿರ ಶಿಕ್ಷಕರ ಕೊರತೆ ಕಲ್ಯಾಣ ಕರ್ನಾಟಕ ಭಾಗದಲ್ಲಿದೆ. ಶಿಕ್ಷಕರ ಜೊತೆಗೆ ಶಾಲಾ ಕೊಠಡಿಗಳ ಸಮಸ್ಯೆ ಸಹ ಹೆಚ್ಚಾಗಿದೆ. ಆದ್ದರಿಂದ ಕೂಡಲೇ ಶಿಕ್ಷಕರ ನೇಮಕ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಪ್ರಶ್ನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಉತ್ತರ ನೀಡಿ, ಶೀಘ್ರದಲ್ಲೇ 10 ಸಾವಿರ ಶಿಕ್ಷಕರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ, ಈ ಹುದ್ದೆಗಳಲ್ಲಿ 6500 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡಲಾಗುತ್ತದೆ. ಸದ್ಯಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು, ಶಿಕ್ಷಕರ ಕೊರತೆ ನೀಗಿಸಲು ಕ್ರಮ ವಹಿಸಿದೆ. ಆರ್ಥಿಕ ಇಲಾಖೆ ಅನುಮತಿ ಕೊಟ್ಟ ನಂತರ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡಲಾಗುತ್ತದೆ ಎಂದರು.
ಬಳಿಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ 6500 ಶಿಕ್ಷಕರ ಹುದ್ದೆ ಖಾಲಿಯಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದೆ. ಇನ್ನೂ ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆಯ ಅನುಮತಿ ಬೇಕಾಗಿಲ್ಲ ಎಂಬ ನಿಯಮ ಸಹ ಇದೆ. ಆದ್ದರಿಂದ ಶಿಕ್ಷಕರ ನೇಮಕಾತಿ ಮಾಡಲು ಪ್ರಕ್ರಿಯೆ ಶುರವಾಗಲಿದೆ. ಆದಷ್ಟು ಶೀಘ್ರ ನೇಮಕ ಪ್ರಕ್ರಿಯೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.