Local News : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಶಾಶ್ವತ್ ಗುರುಕುಲ್ ಪಬ್ಲಿಕ್ ಶಾಲೆಯ ವತಿಯಿಂದ ಶ್ರೀ ಗಾಯತ್ರಿ ಪ್ರಸಾದ ಭವನದಲ್ಲಿ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ವಸ್ತು ಪ್ರದರ್ಶನದಲ್ಲಿ ನೂರಾರು ವರ್ಷಗಳ ಹಿಂದೆ ಬಳಸುತ್ತಿದ್ದ ಗ್ರಾಮಾಪೋನ್ ಸೇರಿದಂತೆ ಹಲವು ವಸ್ತುಗಳನ್ನು ಪ್ರದರ್ಶನ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಶಾಶ್ವತ್ ಗುರುಕುಲ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ನಿರಂಜನ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕತೆಯ ಬಗ್ಗೆ ಜ್ಞಾನ ಇರುವುದು ತುಂಬಾನೆ ಅಗತ್ಯವಾಗಿದೆ. ಜೊತೆಗೆ ಸುಮಾರು ವರ್ಷಗಳ ಹಿಂದೆ ಇಷ್ಟೊಂದು ತಂತ್ರಜ್ಞಾನ ಇಲ್ಲದೇ ಇದ್ದರೂ ಹಲವು ಅಪರೂಪದ ಹಾಗೂ ವಿಭಿನ್ನವಾದ ವಸ್ತುಗಳನ್ನು ನಮ್ಮ ಪೂರ್ವಜರು ಬಳಸುತ್ತಿದ್ದರು. ಉದಾಹರಣೆಗೆ ಗ್ರಾಮಾಪೋನ್, ಈ ಉಪಕರಣ ಅಂದಿನ ಕಾಲದಲ್ಲಿ ತುಂಬಾನೆ ಪ್ರಾಮುಖ್ಯತೆ ಪಡೆದಿತ್ತು. ಈ ಉಪಕರಣದ ಮೂಲಕ ಸಂಗೀತವನ್ನು ಕೇಳಲಾಗುತ್ತಿತ್ತು. ನಮ್ಮ ಭಾರತೀಯರ ಜ್ಞಾನ ತುಂಬಾ ಗುಣಮಟ್ಟದಿಂದ ಕೂಡಿದೆ. ನೂರಾರು ವರ್ಷಗಳ ಹಿಂದೆಯೇ ಗ್ರಾಮಾಪೋನ್ ಮಾದರಿಯ ಅದೆಷ್ಟೋ ವಸ್ತುಗಳನ್ನು ತಯಾರಿಸಿ ಬೇರೆ ದೇಶಗಳಿಗೆ ಮಾದರಿಯಾಗಿದ್ದಾರೆ. ಅದೇ ರೀತಿ ಇಂದಿನ ಮಕ್ಕಳು ಈಗಿರುವ ತಂತ್ರಜ್ಞಾನ ಬಳಸಿಕೊಂಡು ಸಾಧನೆ ಮಾಡಬೇಕು. ಇಡೀ ವಿಶ್ವಕ್ಕೆ ನಮ್ಮ ಭಾರತೀಯರು ಮಾದರಿಯಾಗಬೇಕು ಎಂದರು.
ಇನ್ನೂ ಈ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಎಲ್.ಕೆ.ಜಿ. ಯಿಂದ ಏಳನೆಯ ತರಗತಿವರೆಗೆ ಪ್ರತಿ ಹಂತದ ಮಕ್ಕಳ ಆಸಕ್ತಿ, ಅಭಿರುಚಿಗೆ ತಕ್ಕಂತೆ ಶಾಲೆಯ ಮುಖ್ಯಸ್ಥರಿಂದ ಮೊದಲಾಗಿ ಶಾಲಾ ಶಿಕ್ಷಕಿಯರು ಹಾಗೂ ಪೋಷಕರ ಪರಿಶ್ರಮದಿಂದ ಮಕ್ಕಳು ತಾವೇ ರಚನೆ ಮಾಡಿದ್ದ ಅನೇಕ ಮಾಡೆಲ್ ಗಳು ಸುಂದರವಾಗಿ ರೂಪುಗೊಂಡಿದ್ದವು. ಈ ವಸ್ತು ಪ್ರದರ್ಶನವನ್ನು ವೀಕ್ಷಿಸಲು ಪೋಷಕರು ಸಾರ್ವಜನಿಕರು ಸೇರಿದಂತೆ ಗುಡಿಬಂಡೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದರು. ಈ ವಸ್ತು ಪ್ರದರ್ಶನದಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಗ್ರಾಮಾಫೋನ್, ಕತ್ತಿಕಠಾರಿಗಳು ಸೇರಿದಂತೆ ಕೃಷಿ ಸಲಕರಣೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ಈ ವೇಳೆ ಶ್ರೀ ಶಾಶ್ವತ್ ಗುರುಕುಲ್ ಪಬ್ಲಿಕ್ ಶಾಲೆಯ ಶಿಕ್ಷಕರಾದ ಲತಾ, ಅಶ್ವತ್ಥಾಚಾರಿ, ಮೆಹಬೂಬ್ ಪಾಷ, ಪ್ರಕಾಶ್, ಪ್ರಭಾಕರ್, ಸುನಿತ, ಸ್ವಾತಿ, ಶ್ರವಂತಿ ಮಹೇಶ್, ಸವಿತ, ಸುಮಿತ್ರ, ನಸ್ರಿನ್ ತಾಜ್, ಸಹಾಯಕಿಯರಾದ ತಾಸೀನಾ, ಕಾಂತಮ್ಮ ಸೇರಿದಂತೆ ಮೊದಲಾದವರಿದ್ದರು.