Local News – ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಚುನಾವಣೆ ಎಂಬುದು ತುಂಬಾನೆ ಮಹತ್ವದ ಪಾತ್ರ ವಹಿಸಿದೆ. ಇಂದಿನ ಮಕ್ಕಳು ಮುಂದೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಮಕ್ಕಳು ಶಾಲಾ ಹಂತದಿಂದಲೇ ಚುನಾವಣೆಯ ಕುರಿತು ಅರಿವು ಪಡೆದುಕೊಳ್ಳಬೇಕು. ಈ ಕಾರಣದಿಂದಲೇ ಸರ್ಕಾರ ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಮಂಜಾನಾಯ್ಕ ತಿಳಿಸಿದರು.
Local News – ಮಕ್ಕಳಿಗೆ ಚುನಾವಣಾ ಪ್ರಕ್ರಿಯೆಗಳ ಅರಿವು ಅಗತ್ಯ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಆಯೋಜಿಸಿದ್ದ ಶಾಲಾ ಸಂಸತ್ ಚುನಾವಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಪ್ರಜಾಪ್ರಭುತ್ವದಲ್ಲಿನ ಹಕ್ಕು-ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು, ಕಡ್ಡಾಯ ಮತ್ತು ರಹಸ್ಯ ಮತದಾನಗಳ ಬಗ್ಗೆ ಜಾಗೃತಿ ಮೂಡಿಸುವುದು, ಮತದಾನದಿಂದ ಯಾರೂ ವಂಚಿತರಾಗದಂತೆ ಮತದಾರರ ಪಟ್ಟಿಗೆ ಮತದಾರರ ಸೇರ್ಪಡೆಗೊಳಿಸುವ ಬಗ್ಗೆ ಪ್ರಚಾರ ಮಾಡುವುದು, ಮಕ್ಕಳಲ್ಲಿ ಬಾಲ್ಯದಿಂದಲೇ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸುವುದು, ತಮ್ಮ ಹಕ್ಕುಗಳ ಬಗ್ಗೆ ಅರಿತು ಅದರ ಬಗ್ಗೆ ಧ್ವನಿ ಎತ್ತುವುದು, ತಮ್ಮ ಶಾಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು ಸೇರಿದಂತೆ ಉತ್ತಮ ಪ್ರತಿನಿಧಿಗಳ ಆಯ್ಕೆಯ ಮೂಲಕ ಸದೃಡ ರಾಷ್ಟ್ರ ಕಟ್ಟಬೇಕೆಂಬ ಉದ್ದೇಶದಿಂದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಮಾದರಿ ಸಂಸತ್ ರಚನೆ ಅಗತ್ಯ ಮತ್ತು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಶಾಲಾ ಹಂತದಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಚುನಾವಣೆಯ ಪ್ರಕ್ರಿಯೆಯಗಳ ಕುರಿತು ಅರಿವು ಮೂಡಿಸುತ್ತಿದೆ. ಇದು ತುಂಬಾ ಅನುಕೂಲಕರವಾಗಿದೆ ಎಂದರು.
Local News – ಹಬ್ಬದ ವಾತಾವರಣ ಸೃಷ್ಟಿಸಿದ ಶಾಲಾ ಸಂಸತ್
ಇನ್ನೂ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಸಂಸತ್ ಚುನಾವಣೆ ಒಂದು ಮಾದರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಜೊತೆಗೆ ಸಾಮಾನ್ಯ ಚುನಾವಣೆಗಳಂತೆ ಭಾಸವಾಗಿದ್ದು ವಿಶೇಷವಾಗಿತ್ತು. ಅಬ್ಬರದ ಪ್ರಚಾರ, ಪರ-ವಿರೋಧ ಪಕ್ಷಗಳ ಆರೋಪ-ಪ್ರತ್ಯಾರೋಪಗಳ ಸುರಿಮಳೆ, ಮತದಾರರ ಓಲೈಕೆ, ಮತ ಚಲಾಯಿಸಲು ಮತಗಟ್ಟೆ ಮುಂದೆ ಸಾಲು ಗಟ್ಟಿ ನಿಂತಿರುವ ಮತದಾರರು, ತಮ್ಮ ಮತದಾನದ ಹಕ್ಕು ಚಲಾಯಿಸಲು ಮತದಾರರಲ್ಲಿನ ಉತ್ಸಾಹ, ಸ್ಪರ್ಧೆ ಮಾಡಿದ ಅಭ್ಯರ್ಥಿಗಳಲ್ಲಿ ಕಂಡ ಹುಮ್ಮಸ್ಸು ಎಲ್ಲವೂ ಸಾಮಾನ್ಯ ಚುನಾವಣೆಗಳಂತೆ ಭಾಸವಾಗಿತ್ತು. ಇದೇ ಸಮಯದಲ್ಲಿ ಮತದಾನದ ಮಹತ್ವ ಸಾರುವಂತಹ ಚುನಾವಣಾ ಗೀತೆಯನ್ನು ಹಾಡುವ ಮೂಲಕ ಚುನಾವಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.
Local News – ಹೊಸ ಶಾಲಾ ಸಂಸತ್ ರಚನೆ ಮತ್ತು ಖಾತೆ ಹಂಚಿಕೆ
ಇನ್ನೂ ಮತದಾನದ ಬಳಿಕ ಸಂಸತ್ ರಚನೆ, ಖಾತೆಗಳ ಹಂಚಿಕೆ, ಪ್ರಮಾಣ ಸ್ವೀಕಾರದಂತಹ ಪ್ರಕ್ರಿಯೆಗಳನ್ನು ಸಹ ನಡೆಸಲಾಯಿತು. ಮಕ್ಕಳೇ ಚುನಾವಣಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸಿದರು. ಪ್ರಧಾನಮಂತ್ರಿಯಾಗಿ 9 ನೇ ತರಗತಿಯ ಅಭಿಷೇಕ್, ಆರೋಗ್ಯ ಸಚಿವರಾಗಿ 9 ನೇ ತರಗತಿಯ ನಂದಿನಿ, ಸ್ವಚ್ಚತೆ ಮತ್ತು ನೈರ್ಮಲ್ಯ ಸಚಿವರಾಗಿ 8ನೇ ತರಗತಿಯ ಚರಣ್, ಪರಿಸರ ಸಂರಕ್ಷಣೆಸ ಚಿವರಾಗಿ 10ನೇ ತರಗತಿಯ ಭರತ್, ಕ್ರಿಡಾ ಸಚಿವರಾಗಿ 10ನೇ ತರಗತಿಯ ಹರೀಶ್, ಸಾಂಸ್ಕೃತಿಕ ಸಚಿವರಾಗಿ 8ನೇ ತರಗತಿಯ ಸ್ವಾತಿ, ನೀರು ಮತ್ತು ಆಹಾರ ಪೂರೈಕೆ ಸಚಿವರಾಗಿ 9ನೇ ತರಗತಿಯ ಪುನೀತ್, ಹಣಕಾಸು ಸಚಿವರಾಗಿ 10ನೇ ತರಗತಿಯ ಚೈತ್ರ ರವರುಗಳು ಆಯ್ಕೆಯಾದರು. Read this also : ರಕ್ಷಾಬಂಧನ 2025 ಯಾವಾಗ? ಶುಭ ಸಮಯ ಯಾವುದು? ಮಾಹಿತಿ ಇಲ್ಲಿದೆ ನೋಡಿ….!
ಈ ವೇಳೆ ಶಾಲೆಯ ಶಿಕ್ಷಕರಾದ ಜಯಮ್ಮ, ಚಂದ್ರಶೇಖರ್, ಸೋಮಶೇಖರ್, ನವ್ಯ, ರಾಧ, ರಾಜಾರೆಡ್ಡಿ, ಸಿಬ್ಬಂದಿಯಾದ ಶ್ಯಾಮ್ ಸುಂದರ್, ಸಂಜೀವಮ್ಮ, ಪುಷ್ಪಮ್ಮ ಸೇರಿದಂತೆ ಹಲವರು ಇದ್ದರು.