Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಏಡುಗರ ಅಕ್ಕಮ್ಮ ದೇವಾಲಯದ ಬಳಿ 50 ಲಕ್ಷ ವೆಚ್ಚದಲ್ಲಿ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಹಾಗೂ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾ.ಪಂ ವ್ಯಾಪ್ತಿಯ ಯರ್ರಹಳ್ಳಿ ಗ್ರಾಮದ 1.20 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು.
Local News -₹50 ಲಕ್ಷ ವೆಚ್ಚದಲ್ಲಿ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣ
ಈ ವೇಳೆ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಪಟ್ಟಣದ ಏಡುಗರ ಅಕ್ಕಮ್ಮ ದೇವಾಲಯದ ಬಳಿ ಸವಿತಾ ಸಮಾಜದ ಸಮುದಾಯದವರಿಗೆ ಅನುಕೂಲವಾಗುವ ಉದ್ದೇಶದಿಂದ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದೇನೆ. ಆದಷ್ಟು ಶೀಘ್ರವಾಗಿ ಸುಸಜ್ಜಿತ ಭವನ ನಿರ್ಮಾಣ ಮಾಡಲು ಸೂಚನೆ ನೀಡಿದ್ದೇನೆ. ಸರ್ಕಾರ ಭವನ ನಿರ್ಮಾಣಕ್ಕೆ 25 ಲಕ್ಷ ಅನುದಾನ ನೀಡಿತ್ತು. ಭವನ ನಿರ್ಮಾಣಕ್ಕೆ 25 ಲಕ್ಷ ಅನುದಾನ ಸಾಲಲ್ಲ ಎಂದು ಮುಖಂಡರು ತಿಳಿಸಿದ್ದು, ಅವರ ಮನವಿಯಂತೆ ಮತ್ತೆ 25 ಲಕ್ಷ ಅನುದಾನ ನೀಡಿ ಒಟ್ಟು 50 ಲಕ್ಷ ಅನುದಾನ ನೀಡಿ ಒಳ್ಳೆಯ ಭವನ ನಿರ್ಮಾಣ ಮಾಡಿಸುತ್ತೇನೆ. ಸವಿತಾ ಸಮುದಾಯದವರು ತುಂಬಾ ಶ್ರಮ ಜೀವಿಗಳು. ನಿಮ್ಮ ಮಕ್ಕಳು ನಿಮ್ಮ ಕುಲಕಸುಬಿಗೆ ಸೀಮಿತ ಮಾಡಬೇಡಿ. ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಿ. ಅವರು ಒಳ್ಳೆಯ ಹುದ್ದೆಗಳನ್ನು ಪಡೆದು ಹೆಸರು ತಂದುಕೊಡುತ್ತಾರೆ. ಶಿಕ್ಷಣಕ್ಕೆ ಏನೇ ಬೇಕಾದರೂ ನಾನು ಸಹಾಯ ಮಾಡುತ್ತೇನೆ. ಅಷ್ಟೇಅಲ್ಲದೇ ಈ ಸಮುದಾಯ ಭವನದಲ್ಲಿ ಮಹಿಳೆಯರಿಗೆ ತರಬೇತಿ ಸಹ ನೀಡಲು ತುಂಬಾ ಅನುಕೂಲವಾಗುತ್ತದೆ ಎಂದರು.
Local News – ಯರ್ರಹಳ್ಳಿ ಗ್ರಾಮ ರಸ್ತೆ ಅಭಿವೃದ್ದಿಗೆ ₹1.20 ಕೋಟಿ
ಇನ್ನೂ ತಾಲೂಕಿನ ಯರ್ರಹಳ್ಳಿ ಗ್ರಾಮದ ಜನರು ತುಂಬಾ ದಿನಗಳಿಂದ ರಸ್ತೆ ಕಾಮಗಾರಿಗಾಗಿ ಮನವಿ ಮಾಡುತ್ತಿದ್ದರು. ಅವರ ಮನವಿಯಂತೆ ಈ ರಸ್ತೆ ಕಾಮಗಾರಿ ನಿರ್ಮಾಣಕ್ಕೆ 1.20 ಕೋಟಿ ಅನುದಾನ ನೀಡಿದ್ದೇನೆ. ಜೊತೆಗೆ ಮತ್ತಷ್ಟು ಅನುದಾನ ಬೇಡಿಕೆಯಿದ್ದು, ಅದನ್ನು ಸಹ ಒದಗಿಸುತ್ತೇನೆ. ಕಾಮಗಾರಿಯನ್ನು ಉತ್ತಮ ಹಾಗೂ ಗುಣಮಟ್ಟದಿಂದ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಗ್ರಾಮಸ್ಥರೂ ಸಹ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ನಡೆಸಬೇಕು. ಕಳಪೆಯಾದರೇ ನನ್ನ ಗಮನಕ್ಕೆ ತರಬೇಕು ಎಂದರು.
Read this also : ನಿಮ್ಮ ಕಿಡ್ನಿ ರಕ್ಷಿಸಿಕೊಳ್ಳಿ: ಕಿಡ್ನಿ ಕಲ್ಲುಗಳಿಗೆ ಕಾರಣವಾಗುವ ಆಹಾರಗಳ ಪಟ್ಟಿ ಇಲ್ಲಿದೆ…!
Local News – ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿ
ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಸರ್ಕಲ್ ಇನ್ಸ್‌ಪೆಕ್ಟರ್ ನಯಾಜ್ ಬೇಗ್, ಪಪಂ ಅಧ್ಯಕ್ಷ ವಿಕಾಸ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ, ಮುಖಂಡರಾದ ಲಕ್ಷ್ಮೀನಾರಾಯಣ, ಆದಿನಾರಾಯಣರೆಡ್ಡಿ, ಇಸ್ಮಾಯಿಲ್ ಆಜಾದ್ ಬಾಬು, ಹನುಮಂತರೆಡ್ಡಿ, ರಮೇಶ್ ರೆಡ್ಡಿ, ಅಂಬರೀಶ್ ಸೇರಿದಂತೆ ಸವಿತಾ ಸಮಾಜದ ಮುಖಂಡರುಗಳು ಹಾಜರಿದ್ದರು.