ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ಪತ್ರಿಕಾ ಭವನಕ್ಕೆ ಮನವಿ ಬರುತ್ತಿದೆ. ಮುಂದಿನ ಒಂದು ವಾರದೊಳಗೆ ಪತ್ರಿಕಾ ಭವನಕ್ಕೆ ಜಾಗ ಮಂಜೂರು ಮಾಡುವುದು ಹಾಗೂ ಮುಂದಿನ ವರ್ಷದೊಳಗೆ ಪತ್ರಿಕಾ ಭವನ ನಿರ್ಮಾಣಕ್ಕೆ ಮುಂದಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು.
ಚಿಕ್ಕಬಳ್ಳಾಪುರ ಗುಡಿಬಂಡೆ ಪಟ್ಟಣದ (Local News) ಗಾಯತ್ರಿ ಪ್ರಸಾದ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಪತ್ರಕರ್ತರು ಸುಮಾರು ವರ್ಷಗಳಿಂದ ಪತ್ರಿಕಾ ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಕೆಲವೊಂದು ಕಾರಣಗಳಿಂದ ನಿವೇಶನ ಮಂಜೂರು ಮಾಡಿಸಲು ಸಾಧ್ಯವಾಗಲಿಲ್ಲ. ಆದಷ್ಟು ಶೀಘ್ರವಾಗಿ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಜೊತೆಗೆ ಮುಂದಿನ ಪತ್ರಿಕಾ ದಿನಾಚರಣೆಯ ಒಳಗೆ ಅನುದಾನವನ್ನು ಒದಗಿಸಿ ಭವನ ನಿರ್ಮಾಣಕ್ಕೆ ಅನುದಾನ ಸಹ ಒದಗಿಸುವುದಾಗಿ ಭರವಸೆ ನೀಡಿದರು. ಇನ್ನೂ ಪತ್ರಿಕಾ ರಂಗ ಸಮಾಜವನ್ನು ತಿದ್ದುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಬ್ಬರು ಸುದ್ದಿಯ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಇತ್ತೀಚಿಗೆ ವೈಯುಕ್ತಿಕ ದ್ವೇಷ ಸಾರುವಂತಹ ಸುದ್ದಿಗಳು ಪ್ರಕಟವಾಗುತ್ತಿವೆ. ಅವುಗಳಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ವೈಯುಕ್ತಿಕ ದುರದ್ದೇಶದಿಂದ ಮಾಡುವಂತಹ ಸುದ್ದಿಗಳಿಂದ ಅನೇಕರಿಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಪತ್ರಕರ್ತರೂ ನೈಜ ಹಾಗೂ ಪ್ರಾಮಾಣಿಕ ವರದಿಯನ್ನು ಪ್ರಕಟಿಸಬೇಕು. ಅಭಿವೃದ್ದಿ, ಜನಪರ, ದಲಿತಪರ, ನೊಂದವರ ಪರ ಪತ್ರಿಕೆಗಳು ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಮಾದ್ಯಮ ಸಲಹೆಗಾರ ಪಿ.ಕೆ.ಚನ್ನಕೃಷ್ಣ, ಇಂದಿನ ಯುಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿ ಪತ್ರಕರ್ತರ ಹೇರಳವಾದ ಅವಕಾಶಗಳಿವೆ. ತಂತ್ರಜ್ಞಾನ ಬೆಳೆದಿದೆ. ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇಂದಿನ ಪತ್ರಿಕೋದ್ಯಮ ಹೊಸ ಆಯಾಮವನ್ನೇ ಕಂಡುಕೊಂಡಿದೆ. ನಾನು ಇದೇ ತಾಲೂಕಿನವನಾಗಿದ್ದು, ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನಹರಿಸಿದ್ದೇನೆ. ಗ್ರಾಮೀಣ ಸಮಸ್ಯೆಗಳ ಕಡೆ ಪತ್ರಕರ್ತರು ಗಮನ ಹರಿಸಬೇಕಿದೆ. ನಮ್ಮ ತಾಲೂಕು ಹಿಂದೆ ಹೇಗಿತ್ತು, ಈಗ ಏನು ಬದಲಾವಣೆಯಾಗಿದೆ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಅನೇಕ ರೈತರು ಭೂಮಿಯನ್ನು ಮಾರಿದ್ದಾರೆ. ಇದರಿಂದ ಲೇಔಟ್ ಗಳು ಬೆಳೆದು ನಿಂತಿವೆ. ಕೃಷಿಯತ್ತ ಒಲವು ಕಡಿಮೆಯಾಗುತ್ತಿದೆ. ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಗಳು ಜಾರಿಯಾದಾಗ ಕೃಷಿ ಭೂಮಿ ಸಹ ಅಭಿವೃದ್ದಿಯಾಗುತ್ತದೆ. ಇದರ ಜೊತೆಗೆ ಮುಖ್ಯವಾಗಿ ಈ ಭಾಗದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕುರಿತು ಪತ್ರಕರ್ತರು ಅರಿವು ಮೂಡಿಸುವಂತಹ ಕೆಲಸ ಮಾಡಬೇಕು ಎಂದರು.
ಬಳಿಕ ನ್ಯೂಸ್ ಎಕ್ಸ್ ಸಂಪಾದಕ ಹಾಗೂ ಯುವ ಪತ್ರಕರ್ತ ಅಮರನಾಥ್ ರವರು ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಕೈ ಬೆರಳಿನಲ್ಲೇ ಸುದ್ದಿಗಳು ಲಭ್ಯವಾಗುತ್ತಿದೆ. ಆದರೆ ಈ ತಂತ್ರಜ್ಞಾನದ ಕಾರಣದಿಂದ ಕನ್ನಡ ಭಾಷೆ, ಕನ್ನಡ ಪದಗಳು ಕೊಲೆಯಾಗುತ್ತಿವೆ. ಕೆಲವೊಂದು ಸುದ್ದಿಮಾದ್ಯಮಗಳಲ್ಲಿ ಬಾಂಬ್ ಸಿಡಿಯಿತು. ಬ್ಲಾಸ್ಟ್ ಆಯ್ತು ಎಂಬೆಲ್ಲಾ ಪದಗಳನ್ನು ಬಳಸುತ್ತಾರೆ. ಇದು ಸರಿಯಲ್ಲ. ಪತ್ರಕರ್ತರು ಸಮಾಜವನ್ನು ತಿದ್ದುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನ್ಯಾಯಸಮ್ಮತ, ನಿಷ್ಟಾವಂತ, ನೈಜ ಸುದ್ದಿಗಳತ್ತ ಪತ್ರಕರ್ತರು ಮುಂದಾಗಬೇಕೆಂದರು.
ಬಳಿಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಂ ಮಾತನಾಡಿ, ಗ್ರಾಮೀಣ ಭಾಗದ ಪತ್ರಕರ್ತರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ, ರಾಜ್ಯ ಪತ್ರಕರ್ತರ ಸಂಘ, ಜಿಲ್ಲಾ ಸಂಘಗಳು ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಪತ್ರಕರ್ತರ ವೃತ್ತಿಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ ಎಂದರು.
ಗುಡಿಬಂಡೆಯಲ್ಲಿ ಪತ್ರಿಕೋದ್ಯಮ ಬೆಳದು ಬಂದ ಹಾದಿ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸ.ನ.ನಾಗೇಂದ್ರ, ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮನಾಥರೆಡ್ಡಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಲಾಜಿ ಮಾತನಾಡಿದರು. ಇದೇ ವೇಳೆ ಸುಮಾರು ವರ್ಷಗಳಿಂದ ಪತ್ರಿಕಾ ವಿತರಣೆ ಮಾಡುತ್ತಿರುವ ಪತ್ರಿಕಾ ವಿತರಕರಿಗೆ ಸನ್ಮಾನ ಮಾಡಲಾಯಿತು. ವಿವಿಧ ಶಾಲೆಗಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು.
ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಿ.ಬಾಲಕೃಷ್ಣ, ಕಾಗತಿ ನಾಗರಾಜಪ್ಪ, ಎನ್.ವೆಂಕಟೇಶ್, ರವಿಕುಮಾರ್, ಕಸಾಪ ಅಧ್ಯಕ್ಷ ಬಿ.ಮಂಜುನಾಥ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ, ಪ.ಪಂ. ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ಶಿಡ್ಲಘಟ್ಟ ಪತ್ರಕರ್ತರು, ವಿವಿಧ ಶಾಲೆಗಳ ಶಿಕ್ಷಕರು ಸೇರಿದಂತೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಇದ್ದರು.