ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಿಪಿಎಂ ಕಚೇರಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ತಾಲೂಕಿನಾದ್ಯಂತ ಇರುವಂತಹ ರೈತರ ಸಮಸ್ಯೆಗಳು, ಸಾಗುವಳಿ ಚೀಟಿ ವಿತರಣೆ, ನೀರಾವರಿ ಯೋಜನೆಗಳೂ ಸೇರಿದಂತೆ ಹತ್ತಾರು ಸಮಸ್ಯೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Local News – ದೇಶಕ್ಕೆ ಅನ್ನ ನೀಡುವ ರೈತ ದಿವಾಳಿಯಾಗುತ್ತಿದ್ದಾನೆ
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಎ.ಆದಿನಾರಾಯಣ ಮಾತನಾಡಿ, ರಾಜ್ಯದಲ್ಲಿ ರೈತಾಪಿ ವರ್ಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ರೈತರನ್ನು ಅಭಿವೃದ್ದಿ ಮಾಡುತ್ತೇವೆ ಎಂದು ಚುನಾವಣೆ ಸಮಯದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರುತ್ತಾರೆ. ಬಳಿಕ ರೈತರ ಕಡೆ ತಿರುಗಿ ಸಹ ನೋಡುವುದಿಲ್ಲ. ದೇಶಕ್ಕೆ ಅನ್ನ ನೀಡುವ ರೈತ ಇದೀಗ ದಿವಾಳಿಯಾಗುತ್ತಿದ್ದಾನೆ. ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾನೆ. ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಬಯಲು ಸೀಮೆ ಪ್ರದೇಶಗಳಿಗೆ ಸರಿಯಾದ ನೀರಾವರಿ ಸೌಲಭ್ಯವಿಲ್ಲ. ಹೀಗೆ ರೈತರು ಸದಾ ಒಂದಲ್ಲ ಒಂದು ರೀತಿಯಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಸಂಘಟನೆಯ ಪರವಾಗಿ ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು. Read this also : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ರೈತ ವಿರೋಧಿಗಳು: ಸೂರ್ಯನಾರಾಯಣ
Local News – ಬಲಾಢ್ಯರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯ
ಬಳಿಕ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಚೆನ್ನರಾಯಪ್ಪ ಮಾತನಾಡಿ, ನಾವು ತಿನ್ನುವಂತಹ ಆಹಾರವನ್ನು ಕಂಪನಿಗಳಲ್ಲಿ ತಯಾರಿಸಲು ಸಾಧ್ಯವಿಲ್ಲ. ತಿನ್ನುವ ಅನ್ನವನ್ನು ಭೂಮಿಯಲ್ಲಿ ರೈತ ಬೆಳೆಯಬೇಕು. ಆದರೆ ಇಂದು ರೈತರು ಮಾತ್ರ ಸಾಲಗಾರರಾಗುತ್ತಿದ್ದಾರೆ. ಕಂಪನಿಗಳ ಮಾಲೀಕರು ಮಾತ್ರ ಶ್ರೀಮಂತರಾಗುತ್ತಿದ್ದಾರೆ. ಗುಡಿಬಂಡೆಯಲ್ಲಿ ಸುಮಾರು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಾ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಹ ರೈತರಿಗೆ ಮಾತ್ರ ಭೂ ಮಂಜೂರಾತಿ ಪತ್ರ ಸಿಗುತ್ತಿಲ್ಲ. ಬಲಾಡ್ಯರಿಗೆ ಮಾತ್ರ ಸಿಗುತ್ತಿದೆ. ಶಾಸಕರೂ ಸಹ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೆ.ಸಿ. ವ್ಯಾಲಿ ನೀರಿನಿಂದ ಈ ಭಾಗದ ಜನತೆ ಕ್ಯಾನ್ಸರ್ ಪೀಡಿತರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕೆ.ಸಿ.ವ್ಯಾಲಿ ಮೂಲಕ ಬರುತ್ತಿರುವ ನೀರು ಭೂಮಿಗೆ ಸೇರಿ ವಿಷಪೂರಿತವಾಗುತ್ತದೆ ಎಂದು ಆರೋಪಿಸಿದರು.

Local News – ಮುಂದಿನ ನಡೆ ಏನು?
ಇದೇ ಸಮಯದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಉಪ್ಪಾರಹಳ್ಳಿ ಶ್ರೀನಿವಾಸ್ ಹಾಗೂ ಜಿಲ್ಲಾ ಸಂಚಾಲಕ ಜಯರಾಮರೆಡ್ಡಿ ತಮ್ಮ ಸಂಘಟನೆಯ ವತಿಯಿಂದ ಮುಂದಿನ ಮೂರು ವರ್ಷಗಳಲ್ಲಿ ಹಮ್ಮಿಕೊಳ್ಳುವ ಹೋರಾಟಗಳ ಬಗ್ಗೆ ತಿಳಿಸಿದರು. ಈ ಸಮಯದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಸೇರಿದಂತೆ ಹಲವರು ಇದ್ದರು.
