Local News – ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಗಟ್ಟಿ ನಾಯಕತ್ವದಿಂದಾಗಿಯೇ ರಾಜ್ಯದಲ್ಲಿಂದು ಕರ್ನಾಟಕ ರಕ್ಷಣಾ ವೇದಿಕೆ ಬಲಿಷ್ಠ ಸಂಘಟನೆಯಾಗಿ ರೂಪಗೊಂಡಿದ್ದು, ವರ್ಷದ 365 ದಿನವೂ ನಾಡು-ನುಡಿ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿಕೊಂಡು ಬರುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಆರ್. ಲೋಕೇಶ್ ತಿಳಿಸಿದರು.
69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಸಮಿತಿ ವತಿಯಿಂದ ಪಟ್ಟಣದ ಸರ್ಕಾರಿ ಬಾಲಕೀಯರ ಶಾಲಾ ಸಂಕೀರ್ಣದ ಆವರಣದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಕನ್ನಡ ಉತ್ಸವ ಹಾಗೂ ಅದ್ದೂರಿ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕರವೇ ಹೋರಾಟದ ಫಲವಾಗಿಯೇ ಸರ್ಕಾರ ಕನ್ನಡ ನಾಮಫಲಕಗಳಲ್ಲಿ ಶೇ 60 ರಷ್ಠು ಕನ್ನಡ ಕಡ್ಡಾಯಗೊಳಿಸಿದೆ. ಬಾಗೇಪಲ್ಲಿ ಸಮೀಪದ ಚಿತ್ರಾವತಿ ಜಲಾಶಯ ನಿರ್ಮಾಣಕ್ಕಾಗಿ ಕರವೇ ಬೆಂಗಳೂರಿನಿಂದ ಬಾಗೇಪಲ್ಲಿಗೆ ಸಾವಿರಾರು ಕರವೇ ಕಾರ್ಯಕರ್ತರೊಂದಿಗೆ ಟಿ.ಎ.ನಾರಾಯಣಗೌಡರು ಪಾದಯಾತ್ರೆಯನ್ನು ನಡೆಸಿದ್ದು ಒಂದು ಇತಿಹಾಸ ಎಂದರು.
ರಾಜ್ಯದಲ್ಲಿ ನಿರಂತರವಾಗಿ ಕರವೇ ಹೋರಾಟಗಳನ್ನು ನಡೆಸುವ ಮೂಲಕ ಕನ್ನಡ ಭಾಷೆ,ನೆಲ-ಜಲದ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ನಂದಿನಿ ನಮ್ಮ ಕರ್ನಾಟಕದ ಮೂಲ ನೆಲೆ. ನಂದಿನಿ ಬ್ರಾಂಡ್ ಕಳೆದುಕೊಳ್ಳಲು ಕನ್ನಡಿಗರು ಸಿದ್ದವಿರಲಿಲ್ಲ. ಅಮೂಲ್ ನೊಂದಿಗೆ ಸೇರಿಸುವ ಸರ್ಕಾರದ ಪ್ರಯತ್ನಗಳನ್ನು ಕರವೇ ವಿಫಲಗೊಳಿಸಿತು ಎಂದ ಅವರು ಬಾಗೇಪಲ್ಲಿಯಂತಹ ಗಡಿ ಪ್ರದೇಶಗಳಲ್ಲಿ ಕರವೇ ನಿರಂತರ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ಕನ್ನಡ ಉತ್ಸವದಲ್ಲಿ ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಲು ಪರೋಕ್ಷ ಪ್ರೋತ್ಸಾಹ ನೀಡುವುದರ ಮೂಲಕ ಹೋರಾಟಗಾರರಿಗೆ ಬೆನ್ನುಲುಬಾಗಿ ನಿಂತಿದ್ದ ಕರವೇ ಹೋರಾಟಗಾರರ ಕುಟುಂಬದ ಮಹಿಳೆಯರನ್ನು ವೇದಿಕೆಯಲ್ಲಿ ಆತ್ಮೀಯವಾಗಿ ಸನ್ಮಾನ ಮಾಡಿದ್ದು ವಿಶೇಷವಾಗಿತ್ತು. ಕರವೇ ವತಿಯಿಂದ ಆಯೋಜಿಸಲಾಗಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ಗೀತೆಗಳಿಗೆ ಕಲಾವಿದರು ನೃತ್ಯ ಮಾಡಿದರಲ್ಲದೆ, ಕನ್ನಡ ಹಾಡುಗಳನ್ನು ಸೊಗಸಾಗಿ ಹಾಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ, ಉಪಾಧ್ಯಕ್ಷೆ ಬಿ.ಎಸ್.ಸುಜಾತ ನರಸಿಂಹನಾಯ್ಡು, ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಟಿಹೆಚ್‍ಓ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ಗುಡಿಬಂಡೆ ಕಸಾಪ ಅಧ್ಯಕ್ಷ ಬಿ.ಮಂಜುನಾಥ್, ಔಷದಿ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ಸತೀಶ್, ಕರವೇ ಮಹಿಳಾ ಜಿಲ್ಲಾಧ್ಯಕ್ಷ ಸುಜಾತಮ್ಮ, ಕರವೇ ತಾಲೂಕು ಅಧ್ಯಕ್ಷ ಕೆ.ಎನ್.ಹರೀಶ್, ಗೌರವಾಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಅಲೀಮ್, ಕೆ.ಎನ್. ಕೃಷ್ಣಪ್ಪ, ಶಿವಕುಮಾರ್, ಕೃಷ್ಣಾನಾಯಕ್, ಅಶೋಕ್,ರಿಯಾಜ್, ಗಗನ್, ಶ್ರೀನಿವಾಸ್, ಗಂಗರತ್ನಮ್ಮ, ರಾಜೇಶ್ವರಿ, ಶ್ರವಂತಿ ಮತ್ತಿತರರು ಇದ್ದರು.