Local News – ಪ್ರತಿನಿತ್ಯ ನಮ್ಮ ಪಟ್ಟಣವನ್ನು ಸ್ವಚ್ಚಗೊಳಿಸುವ ಕಾರ್ಯ ಮಾಡುವ ಪೌರ ಕಾರ್ಮಿಕರ ಸೇವೆ ಶ್ಲಾಘನೀಯವಾದುದು, ಅವರು ಸ್ವಚ್ಚತೆ ಮಾಡುವುದರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಸಹ ಕಾಳಜಿ ವಹಿಸಬೇಕೆಂದು ಗುಡಿಬಂಡೆ ಪಪಂ ಮುಖ್ಯಾಧಿಕಾರಿ ಸಭಾ ಶಿರೀನ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.

Local News – ಪೌರಕಾರ್ಮಿಕರು ಸಮಾಜದ ಜೀವನಾಡಿ
ಪ್ರತಿನಿತ್ಯ ಸೂರ್ಯ ಹುಟ್ಟುವುದಕ್ಕೂ ಮುನ್ನಾ ಪೌರಕಾರ್ಮಿಕರು ಪಟ್ಟಣವನ್ನು ಸ್ಚಚ್ಚ ಮಾಡುವ ಕೆಲಸ ಮಾಡುತ್ತಾರೆ. ಅವರ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಚತೆಯ ಕುರಿತು ಬಿಡುವಿಲ್ಲದೆ ನಿರಂತರ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಸೇವೆ ಹಾಗೂ ಅವರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪೌರ ಕಾರ್ಮಿಕರನ್ನು ಯಾರೂ ಕೀಳಾಗಿ ನೋಡಬಾರದು. ತಾವುಗಳೂ ಸಹ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಸ್ವಚ್ಚತೆ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಜನರೂ ಸಹ ಮೆಡಿಕಲ್ ವೇಸ್ಟ್ ಹಾಗೂ ಇತರೆ ತಾಜ್ಯವನ್ನು ಪ್ರತ್ಯೇಕಿಸಿ ಪೌರ ಕಾರ್ಮಿಕರಿಗೆ ನೀಡಬೇಕು ಎಂದರು.
Local News – ಕುಡಿತದ ಚಟಕ್ಕೆ ಬಲಿಯಾಗಬೇಡಿ
ಬಳಿಕ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಜೀವಿಕ ನಾರಾಯಣಸ್ವಾಮಿ ಮಾತನಾಡಿ, ಸಮಾಜದಲ್ಲಿ ಇಂದು ಪೌರಕಾರ್ಮಿಕರು ಎಂದರೇ ಕೀಳುಭಾವನೆ ಇದೆ. ಅದರ ಜೊತೆಗೆ ಪೌರಕಾರ್ಮಿಕರಿಗೂ ಸಹ ಇದೇ ಭಾವನೆ ಇದೆ. ನೀವುಗಳೂ ಎಲ್ಲರಂತೆ ಸಮಾನರು. ಸದಾ ಸ್ವಚ್ಚತೆಯಲ್ಲಿ ತೊಡಗಿರುವ ನಿಮ್ಮ ಸೇವೆ ಅಪಾರವಾದುದು. ಸಾಮಾನ್ಯವಾಗಿ ಪೌರ ಕಾರ್ಮಿಕರು ಬಡ ವರ್ಗದ ಹಿನ್ನೆಲೆ ಯುಳ್ಳವರಾಗಿದ್ದು ಅವರ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಮನೆ, ನಿಗದಿತ ವೇತನ, ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಾಗಿದೆ. ಪೌರಕಾರ್ಮಿಕರು ಕುಡಿತಕ್ಕೆ ದಾಸರಾಗಬಾರದು. Read this also : 25 ಲಕ್ಷ ಮಹಿಳೆಯರಿಗೆ ಉಚಿತ LPG ಸಂಪರ್ಕ: ನವರಾತ್ರಿ ಉಡುಗೊರೆ ನೀಡಿದ ಪ್ರಧಾನಿ ಮೋದಿ..!

ವಿದ್ಯೆಯಿಂದ ಮಾತ್ರ ಸಾಧನೆ ಮಾಡಲು ಸಾಧ್ಯವಾಗಿದ್ದು, ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಪ್ರಮಾಣಿಕವಾಗಿ ಕೆಲಸ ಮಾಡುವಂತಹ ಪೌರಕಾರ್ಮಿಕರಿಗೆ ಸರ್ಕಾರದಿಂದ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಇದೀಗ ನಿವೃತ್ತಿಯಾದವರಿಗೆ ಯಾವುದೇ ಸೌಲಭ್ಯ ಸಹ ಸಿಗುತ್ತಿಲ್ಲ. ಮುಂದೆಯಾದರೂ ಇತರೇ ಪೌರಕಾರ್ಮಿಕರಿಗಾದರೂ ಪಿಎಫ್, ಎಲ್.ಐ.ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ದೊರಕಿಸಿಕೊಡಲು ಪಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
Local News – ಹಬ್ಬದ ವಾತಾವರಣದಲ್ಲಿ ಸಂಭ್ರಮಾಚರಣೆ
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ವಿಕಾಸ್, ಸದಸ್ಯರಾದ ಇಸ್ಮಾಯಿಲ್ ಆಜಾದ್ ಬಾಬು, ಅಂಬರೀಶ್ ಪೌರ ಕಾರ್ಮಿಕರ ಸೇವೆಯ ಕುರಿತು ಶ್ಲಾಘಿಸಿದರು. ಜೊತೆಗೆ ಪೌರ ಕಾರ್ಮಿಕರ ಆರೋಗ್ಯ ಹಾಗೂ ಅವರ ಸಮಸ್ಯೆಗಳಿಗೆ ಸ್ಪಂಧಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಗಿತ್ತು. ದಿನಾಚರಣೆಯ ನಿಮಿತ್ತ ಪೌರಕಾರ್ಮಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ವಿಶೇಷವಾಗಿ ಪೌರ ಕಾರ್ಮಿಕರಿಗೆ ಪಪಂ ಸದಸ್ಯರು ಹಾಗೂ ಅಧಿಕಾರಿ ವರ್ಗ ಆತ್ಮೀಯವಾಗಿ ಸನ್ಮಾನಿಸಿದರು.

ಪೌರ ಕಾರ್ಮಿಕರು ಬಿಳಿ ಶರ್ಟ್ ಹಾಗೂ ಪಂಚೆ ಧರಿಸಿ ಸಂಪ್ರದಾಯಿಕ ಉಡುಗೆಯಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದು, ಒಂದು ರೀತಿಯ ಹಬ್ಬದ ವಾತವಾರಣ ನಿರ್ಮಾಣವಾಗಿತ್ತು. ಈ ವೇಳೆ ಪಪಂ ಉಪಾಧ್ಯಕ್ಷ ಗಂಗರಾಜು, ಸದಸ್ಯರಾದ ರಾಜೇಶ್, ಬಷೀರ್, ಜಿ.ರಾಜೇಶ್, ಆದಿನಾರಾಯಣಪ್ಪ,ಜೀವಿಕ ಸಂಘಟನೆಯ ನಾರಾಯಣಸ್ವಾಮಿ, ಅಮರಾವತಿ, ಪಪಂ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.
