Local News – ಸರ್ಕಾರದಿಂದ ಬಡವರಿಗೆ ಮಂಜೂರಾದ ಜಮೀನಿಗೆ ಪಕ್ಕದ ಜಮೀನಿನವರು ಅಕ್ರಮವಾಗಿ ಪ್ರವೇಶಿಸಿ, ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕಸಬಾ ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ಕೃಷ್ಣಬಾಯಮ್ಮ ಹಾಗೂ ಅವರ ಕುಟುಂಬಸ್ಥರು ಗುಡಿಬಂಡೆ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಿದರು. ಈ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಿಗ್ಬತ್ತುಲ್ಲಾ ಪ್ರತಿಭಟನಾಕಾರರ ಮನವಿ ಆಲಿಸಿ ಸಾಮಾಜಿಕ ನ್ಯಾಯ ಒದಗಿಸುವ ಭರವಸೆ ನೀಡಿದರು.

Local News – ಧರಣಿನಿರತರರ ನೋವು ಏನು?
ಈ ವೇಳೆ ಸಂತ್ರಸ್ತ ಕೃಷ್ಣಬಾಯಮ್ಮ ಅವರ ಮಗ ಸುರೇಶ್ ಮಾತನಾಡಿ,”ನಾವು ಅತ್ಯಂತ ಬಡವರಾಗಿದ್ದು, ಲಕ್ಕೇನಹಳ್ಳಿ ಗ್ರಾಮದ ಸರ್ವೆ ನಂ. 74ರಲ್ಲಿ 1 ಎಕರೆ 5 ಗುಂಟೆ ಜಮೀನನ್ನು ಸರ್ಕಾರ 1998ರಲ್ಲಿ ದರಖಾಸ್ತು ಮೂಲಕ ನಮ್ಮ ತಾಯಿಗೆ ಮಂಜೂರು ಮಾಡಿದೆ. ಇದರ ಖಾತೆ, ಪಹಣಿ ಎಲ್ಲವೂ ನಮ್ಮ ಹೆಸರಿನಲ್ಲಿದೆ. ಜೀವನೋಪಾಯಕ್ಕಾಗಿ ನಾವು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಊರಿನಲ್ಲಿ ವಯಸ್ಸಾದ ತಾಯಿ ಒಬ್ಬರೇ ವಾಸವಾಗಿದ್ದಾರೆ. ಆದರೆ ನಮ್ಮ ಜಮೀನಿನ ಪಕ್ಕದವರು ನಮ್ಮ ಜಮೀನನ್ನು ಸಹ ಒತ್ತುವರಿ ಮಾಡಿಕೊಂಡಿದ್ದಾರೆ.
Local News – ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಯತ್ನ : ಆರೋಪ
ಈಗಾಗಲೇ 6 ಎಕರೆ ಸ್ವಂತ ಜಮೀನು ಮತ್ತು 3-4 ಎಕರೆ ಸರ್ಕಾರಿ ಜಮೀನು ಸೇರಿ ಸುಮಾರು 10 ಎಕರೆ ಒಡೆತನ ಹೊಂದಿದ್ದಾರೆ. ಆದರೂ ನಮ್ಮ ಜಮೀನಿನ ಮೇಲೆ ಕಣ್ಣುಹಾಕಿ, ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸುತ್ತಿದ್ದಾರೆ. ರಾತ್ರೋರಾತ್ರಿ ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕಲ್ಲು ನೆಟ್ಟಿದ್ದಾರೆ. ಈ ಕುರಿತು ಅವರನ್ನು ಪ್ರಶ್ನಿಸಿದರೇ ನಮ್ಮ ಮೇಲೆಯೇ ದೌರ್ಜನ್ಯ ಎಸಗುತ್ತಿದ್ದಾರೆ. ಈ ಕಾರಣದಿಂದ ನಾವು ತಾಲೂಕು ಕಚೇರಿಯ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ನಮಗೆ ನ್ಯಾಯ ಸಿಗುವ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು. Read this also : ಅಸ್ಸಾಂ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳ ಆರೈಕೆ; ಶಿಕ್ಷಕಿಯ ಹೃದಯಸ್ಪರ್ಶಿ ಕಾರ್ಯಕ್ಕೆ ಮೆಚ್ಚುಗೆ…!

Local News – ಪ್ರತಿಭಟನಾಕಾರರ ಮನವೊಲಿಸಿದ ತಹಸೀಲ್ದಾರ್
ಇನ್ನೂ ಸ್ಥಳಕ್ಕೆ ತಹಸೀಲ್ದಾರ್ ಸಿಗ್ಬತ್ತುಲ್ಲಾ ಪ್ರತಿಭಟನಾಕಾರರ ಮನವಿಯನ್ನು ಆಲಿಸಿದರು. ಸ್ಥಳಕ್ಕೆ ಸ್ವತಃ ಭೇಟಿ ನೀಡಿ, ಮೂಲ ದಾಖಲೆಗಳನ್ನು ಪರಿಶೀಲಿಸಲಾಗುವುದು. ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ಕಾನೂನು ರೀತಿ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸಿ ಸಾಮಾಜಿಕ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ತಹಶೀಲ್ದಾರ್ ಅವರ ಭರವಸೆ ಮೇರೆಗೆ ಧರಣಿಯನ್ನು ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ಕೃಷ್ಣಬಾಯಮ್ಮ ಮತ್ತು ಅವರ ಸಂಬಂಧಿಕರು ಹಾಜರಿದ್ದರು.
