Local News – ಹಬ್ಬ ಹರಿದಿನಗಳೆನ್ನದೇ ಕೆಲಸ ಮಾಡುವಂತಹ ಮಸಣ ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಹಾಗೂ ತಮಟೆ ಕಲಾವಿದರ ಸಂಘ ಜಿಲ್ಲಾ ಸಂಚಾಲಕ ಮುನಿಯಪ್ಪ ಆರೋಪಿಸಿದರು.

Local News – ಬೇಡಿಕೆ ಈಡೇರಿಸುವಲ್ಲಿ ಅಧಿಕಾರಿಗಳು ವಿಫಲ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಹಾಗೂ ದಪ್ಪರ್ತಿ ಗ್ರಾಪಂ ಕಚೇರಿಗಳ ಮುಂದೆ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಹಾಗೂ ತಮಟೆ ಕಲಾವಿದರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಮಶಾನಗಳಲ್ಲಿ ಮೃತರ ಶವ ಸಂಸ್ಕಾರ ಮಾಡಲು ಪ್ರತಿ ಗ್ರಾಮದಲ್ಲೂ ಮಸಣ ಕಾರ್ಮಿಕರಿದ್ದಾರೆ. ಆದರೆ ಅವರು ಒಂದು ಸೇವೆಯಾಗಿ ಕೆಲಸ ಮಾಡುತ್ತಿದ್ದು, ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗಾಗಿ ನಿವೇಶನ, ವಸತಿ ರಹಿತ ಕಾರ್ಮಿಕರನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸಬೇಕು. ಈಗಾಗಲೇ ಹಲವು ಬಾರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
Local News – ಆರೋಗ್ಯ ಭದ್ರತೆ ಒದಗಿಸಿ
ಮಸಣ ಕಾರ್ಮಿಕರು ಸಮಾಧಿಗಾಗಿ ಗುಣಿಗಳನ್ನು ಅಗೆಯಬೇಕಾದರೆ ಕಲ್ಲು, ಮುಳ್ಳುಗಳನ್ನು ಲೆಕ್ಕಿಸದೆ ಕೆಲಸ ಮಾಡಬೇಕು. ಒಂದೊಂದು ವೇಳೆ ಸ್ಮಶಾನಗಳಲ್ಲಿ ಮೃತ ದೇಹಗಳ ವಾಸನೆ, ರೋಗರುಜನಗಳು ಹರಡುವ ಭೀತಿ ಎದುರಿಸುತ್ತಾರೆ. ಅಷ್ಟೇ ಅಲ್ಲದೆ ಒಮ್ಮೊಮ್ಮೆ ಗಾಯಗಳಾಗುತ್ತವೆ. ಇಂತಹ ಅನಾಹುತಗಳಿಂದ ಭದ್ರತೆ ಇಲ್ಲವಾಗಿದೆ. ಹಾಗಾಗಿ ಸರಕಾರ ಗ್ರಾಮ ಪಂಚಾಯತಿಗಳ ಮೂಲಕ ಮಸಣ ಕಾರ್ಮಿಕರಿಗೆ ಆರೋಗ್ಯ ಭದ್ರತೆ ಒದಗಿಸಿ, ಪಿಪಿಇ ಕಿಟ್‌ಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.

Local News – ಪ್ರಮುಖ ಬೇಡಿಕೆಗಳು
ಮಸಣ ಕಾರ್ಮಿಕರಿಗೆ ಉಚಿತ ಆರೋಗ್ಯ ಕಾರ್ಡ್ ಹಾಗೂ ಉಚಿತ ವಿಮೆ ಸೌಲಭ್ಯವನ್ನು ಗ್ರಾಪಂ ನಿಂದ ಕಲ್ಪಿಸುವುದು, ಕೇರಳ ರಾಜ್ಯ ಸರ್ಕಾರದ ಮಾದರಿಯಲ್ಲಿ ಮಸಣ ಕಾರ್ಮಿಕರಿಗೆ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ 10 ಲಕ್ಷ ಹಣ ನೀಡುವುದು, 45 ವರ್ಷ ಮೇಲ್ಪಟ್ಟ ಎಲ್ಲಾ ಮಸಣ ಕಾರ್ಮಿಕರಿಗೆ ಮಾಹೆಯಾನ 4 ಸಾವಿರ ಪಿಂಚಣಿ ನೀಡುವುದು, ಮಸಣ ಕಾರ್ಮಿಕರ ವಿದ್ಯಾವಂತ ನಿರುದ್ಯೋಗ ಯುವಕ/ಯುವತಿಯರಿಗೆ ಸರ್ಕಾರಿ ನೌಕರಿ ಇಲ್ಲವಾದಲ್ಲಿ ನಿರುದ್ಯೋಗ ಭತ್ಯೆಯಾಗಿ ಮಾಸಿಕ 10 ಸಾವಿರ ನೀಡುವುದು, ಪ್ರತಿ ಕುಟುಂಬಕ್ಕೆ 5 ಎಕರೆ ಕೃಷಿ ಅಥವಾ 2.5 ಎಕರೆ ತರಿ ಜಮೀನು ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಬಂಧಪಟ್ಟ ಪಂಚಾಯತಿಗಳ ಪಿಡಿಒಗಳಿಗೆ ಮನವಿ ಪತ್ರ ಸಲ್ಲಿಸಿದರು.
Read this also : ಸಮಾಜದ ಅನಿಷ್ಟ ಪದ್ದತಿಗಳ ಬಗ್ಗೆ ಜಾಗೃತಿ ಮೂಡಿಸಿದ ಮಹನೀಯರನ್ನು ಸದಾ ಸ್ಮರಿಸಬೇಕು: ಶಾಸಕ ಸುಬ್ಬಾರೆಡ್ಡಿ
ಈ ವೇಳೆ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಹಾಗೂ ತಮಟೆ ಕಲಾವಿದರ ಸಂಘ ಹಂಪಸಂದ್ರ ಗ್ರಾಮ ಪಂಚಾಯಿತಿ ಸಮಿತಿ ಅಧ್ಯಕ್ಷ ಆದಿನಾರಾಯಣಪ್ಪ, ಉಪಾಧ್ಯಕ್ಷರಾದ ರಾಮಾಂಜಿನಪ್ಪ, ಗಂಗಾಧರ, ಶ್ರೀರಾಮಪ್ಪ, ಕಾರ್ಯದರ್ಶಿ ಎಲ್ ಆದಿನಾರಾಯಣಪ್ಪ, ಕೃಷ್ಣಪ್ಪ, ಅಶ್ವತ್ಥಪ್ಪ ಸೇರಿದಂತೆ ಹಲವರು ಇದ್ದರು.