Local News – ಗುಡಿಬಂಡೆ ತಾಲೂಕಿನ ಎಲ್ಲೆಡೆ ಮುನ್ನೆಚ್ಚರಿಕಾ ಕ್ರಮವಾಗಿ ರಾಸುಗಳಿಗೆ ಕಾಲುಬಾಯಿ ಜ್ವರ ಹಾಗೂ ಚರ್ಮಗಂಟು ರೋಗಗಳು ಹರಡದಂತೆ 8ನೇ ಸುತ್ತಿನ ಲಸಿಕಾ ಅಭಿಯಾನವನ್ನು ಕೈಗೊಳ್ಳಲಾಗಿದ್ದು ಹೈನುಗಾರರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುಬ್ರಮಣಿ ಮನವಿ ಮಾಡಿದರು.

Local News – ರೋಗ ಹರಡುವಿಕೆ ಮತ್ತು ಲಸಿಕೆಯ ಮಹತ್ವ
ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ಚಿಕ್ಕತಮ್ಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಬಳಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಗುಡಿಬಂಡೆ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಪುರಸ್ಕೃತ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 8ನೇ ಸುತ್ತಿನ ಕಾಲುಬಾಯಿ ಜ್ವರ ಮತ್ತು ಚರ್ಮಗಂಟು ರೋಗದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಈ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಒಂದು ರಾಸುವಿನಿಂದ ಇನ್ನೊಂದಕ್ಕೆ ನೇರ ಸಂಪರ್ಕ ಹಾಗೂ ಗಾಳಿಯ ಮೂಲಕ ಹರಡುತ್ತದೆ.
ಕಾಲುಬಾಯಿ ಜ್ವರ ಎಲ್ಲ ಸೀಳು ಗೊರಸುಳ್ಳ ಪ್ರಾಣಿಗಳಾದ ದನ, ಎಮ್ಮೆ, ಹಂದಿ, ಕುರಿ, ಮೇಕೆ ಹಾಗೂ ಕಾಡು ಪ್ರಾಣಿಗಳಾದ ಜಿಂಕೆ, ಕಾಡೆಮ್ಮೆ ಮುಂತಾದ ಪ್ರಾಣಿಗಳಲ್ಲಿ ವೈರಾಣುವಿನಿಂದ ಬರುವ ಕಾಯಿಲೆಯಾಗಿದೆ ಎಂದರು. ಕಾಲುಬಾಯಿ ರೋಗ ತಡೆಗಟ್ಟಲು ಲಸಿಕೆ ಹಾಕುವುದೊಂದೇ ಮಾರ್ಗವಾಗಿದ್ದು, ಪ್ರತಿ 6 ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ರೈತರು ತಮ್ಮ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಆರ್ಥಿಕ ನಷ್ಟದಿಂದ ಪಾರಾಗಬೇಕು ಎಂದರು. Read this also : ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ 300 ಅಪ್ರೆಂಟಿಸ್‌ಶಿಪ್ ಹುದ್ದೆಗಳು: 10ನೇ ತರಗತಿ ಪಾಸಾದವರಿಗೆ ಬಂಪರ್ ಅವಕಾಶ!
Local News – ಒಂದೇ ಲಸಿಕೆ, ಎರಡು ರೋಗಕ್ಕೆ ಪರಿಹಾರ!
ಇದೇ ಸಮಯದಲ್ಲಿ ಕೊಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕಿ ಡಾ. ನವ್ಯಶ್ರೀ ಜಾನುವಾರುಗಳಿಗೆ ಆಗಿಂದಾಗ್ಗೆ ಕಾಲು ಬಾಯಿ ಜ್ವರ ಹಾಗು ಚರ್ಮ ಗಂಟು ರೋಗಗಳು ಹರಡುತ್ತಿರುತ್ತವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ಇದೇ ಮೊದಲ ಬಾರಿಗೆ ಒಂದೇ ಬಾರಿಗೆ ಎರಡೂ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಂಡಿದ್ದು, ಈ ಮೂಲಕ ಪಶುಗಳ ರೋಗ ನಿರೋಧಕ ಶಕ್ತಿ ದ್ವಿಗುಣಗೊಳಿಸುವುದರೊಂದಿಗೆ ಸಿಬ್ಬಂದಿ ಸಮಯ, ವೆಚ್ಚ ಉಳಿತಾಯಕ್ಕೂ ಶ್ರಮವಹಿಸಲಾಗುತ್ತಿದೆ ಎಂದರು.

Local News – ಕಾರ್ಯಕ್ರಮದಲ್ಲಿ ಭಾಗವಹಿಸಿದವರು
ಈ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಕೊಚಿಮುಲ್ ಶಿಬಿರ ಕಚೇರಿಯ ಸಹಾಯಕ ವ್ಯವಸ್ಥಾಪಕ ಡಾ. ಸಂದೀಪ್ ಹಾಗೂ ಚಿಕ್ಕತಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸಿಬ್ಬಂದಿ ಸೇರಿದಂತೆ ಹಲವಾರು ರೈತರು ಮತ್ತು ಪಶುಪಾಲಕರು ಉಪಸ್ಥಿತರಿದ್ದರು.
