ಬಾಗೇಪಲ್ಲಿ ತಾಲೂಕಿನ ಬಡಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನನ್ನ ಅಧಿಕಾರದ ಅವಧಿಯಲ್ಲಿ ಶೈಕ್ಷಣಿಕ ಅಭಿವೃದ್ದಿ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು (Local News) ನೀಡುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಹೊರವಲಯದ ಜಡಲಬೈರವೇಶ್ವರ ದೇವಾಲಯದ ಸಮೀಪದಲ್ಲಿ 1 ಕೋಟಿ 70 ಲಕ್ಷ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕಾರಣಕ್ಕೂ ತಾಲೂಕಿನ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ತಾಲೂಕಿನಲ್ಲಿ ಈ 5 ವರ್ಷಗಳಲ್ಲಿ ಎಸ್.ಸಿ ಎಸ್.ಟಿ ಹಾಗೂ ಬಿಸಿಎಂ ಇಲಾಖೆಯ 15 ಕೋಟಿ ರೂ.ಗಳ ವೆಚ್ಚದಲ್ಲಿ ವಿದ್ಯಾರ್ಥಿನಿಲಯಗಳ ಕಟ್ಟಡಗಳನ್ನು ನಿರ್ಮಾಣಮಾಡಲಾಗಿದೆ ಎಂದ ಅವರು ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ಒಳ್ಳೆಯ ವಿದ್ಯಾವಂತರನ್ನಾಗಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ನೂತನ ಚೇಳೂರು ತಾಲೂಕಿನಲ್ಲಿ ಬಿಸಿಎಂ ಇಲಾಖೆಯ ವಿದ್ಯಾರ್ಥಿನಿಲಯವನ್ನು 4ಕೋಟಿ ರೂ.ಗಳ ವೆಚ್ಚದಲ್ಲಿ ಅತೀ ಶೀಘ್ರದಲ್ಲಿಯೇ ಗುದ್ದಲಿಪೂಜೆ ನೆರವೇರಿಸಿ ಮುಂದಿನ ಶೈಕ್ಷಣ ವರ್ಷಕ್ಕೆ ಲೋಕಾರ್ಪಣೆ ಮಾಡುವುದಾಗಿ ತಿಳಿಸಿದ ಅವರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿಯಾಗಿರುವ ಪರಿಣಾಮ ವಿವಿಧ ಕಾಯಿಲೆಗಳಿಂದ ತಾಲೂಕಿನ ಬಡಜನತೆಗೆ ತೊಂದರೆ ಅನುಭವಿಸುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಆರೋಗ್ಯ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದ ಅವರು ಸರ್ಕಾರ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ವಿದ್ಯಾರ್ಥಿಗಳು ಸರ್ಕಾರದ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಹಿಷಾ ಎನ್.ಪತ್ರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಆರ್.ಶಿವಪ್ಪ, ಪೊಲೀಸ್ ಇನ್ಸ್‍ಪೆಕ್ಟರ್ ಪ್ರಶಾಂತ್ ವರ್ಣಿ, ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಶ್ರೀನಿವಾಸರೆಡ್ಡಿ, ಎ.ವಿ.ಪೂಜಪ್ಪ, ಬಿ.ವಿ.ವೆಂಕಟರವಣ ಮತ್ತಿತರರು ಇದ್ದರು.